ನಿಮ್ಮ ಸುದ್ದಿ ಬಾಗಲಕೋಟೆ
ಕುಡಿವ ನೀರಿಗಾಗಿ ಆಗ್ರಹಿಸಿ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದರು.
ರಕ್ಕಸಗಿ ಗ್ರಾಮದ ಉರ್ದು ಶಾಲೆ ಹಿಂಬಾಗದ ಪ್ರದೇಶದ ಮನೆಗಳಿಗೆ ನೀರಿನ ವ್ಯವಸ್ಥೆ ಇಲ್ಲ. ಹಲವು ಮೂಲ ಸಮಸ್ಯೆಯಿಂದ ಬಳಲುತ್ತಿರುವ ಅಲ್ಲಿನ ಪ್ರದೇಶ ನಿರ್ಲಕ್ಷಿತ ಪ್ರದೇಶವಾಗಿದೆ. ಕೂಡಲೆ ಅಧಿಕಾರಿಗಳು ನೀರು, ವಿದ್ಯುತ್ ಹಾಗೂ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಖಾಲಿಕೊಡಗಳ ಸಮೇತ ಗ್ರಾಪಂ ಕಚೇರಿ ಎದುರು ಧರಣಿ ನಡೆಸಿದರು.
ಗ್ರಾಪಂ ಸದಸ್ಯ ಮಲೀಕಸಾಬ ಕಲಬುರ್ಗಿ, ಹಲವು ವರ್ಷದಿಂದ ಸಮಸ್ಯೆ ಇದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಸದ್ಯಕ್ಕಿರುವ ಪಿಡಿಒ ಅವರಿಗೆ ನಮ್ಮ ಏರಿಯಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಾಟರ್‌ಮನ್‌ಗಳು ಹೇಳಿದ್ದೆ ವೇದವಾಕ್ಯವಾದಂತಿದೆ. ಸಮಸ್ಯೆ ಹೊತ್ತು ಬಂದ ಜನತೆಗೆ ಸದಸ್ಯರಾದ ನಾವು ಉತ್ತರ ಕೊಡುವುದು ಕಷ್ಟವಾಗಿದೆ ಎಂದು ದೂರಿದರು.
ಸದಸ್ಯ ತುಳಚಪ್ಪ ಜಾಲಿಹಾಳ, ನೀರು ಕೊಡಿ ಎಂದರೆ ಇಲ್ಲಸಲ್ಲದ ಉತ್ತರ ಹೇಳುತ್ತಾರೆ. ಹೊರ ಬೋರ್‌ವೆಲ್ ಹಾಕಬೇಕು. ಇಲ್ಲವೆ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ ಎಂಬ ಮಾಹಿತಿ ಇದ್ದು ಅದರ ಮೂಲಕವಾದರೂ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಪಿಡಿಒ ಶಕುಂತಲಾ ಕೊಡತೆ, ನಿವಾಸಿಗಳ ಸಮಸ್ಯೆ ಆಲಿಸಿ ಖುದ್ದು ಸ್ಥಳ ವೀಕ್ಷಣೆ ಮಾಡಿದರು. ಈಗಾಗಲೆ ಹೊಸ ಬೋರ್‌ವೆಲ್‌ಗಾಗಿ ಬೇಡಿಕೆ ಇಡಲಾಗಿದೆ. ಕುಡಿವ ನೀರಿನ ಪೂರೈಕೆ ಕುರಿತು ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ಇಲಾಖೆಯೊಂದಿಗೆ ಮಾತನಾಡಿ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದರು.
ಬಂದಗಿಸಾಬ್ ವಾಲಿಕಾರ, ಬಾಷಾಸಾಬ ಬನ್ನಟ್ಟಿ, ಸಂಗಯ್ಯ ಹಿರೇಮಠ, ಮಲ್ಲಪ್ಪ ಗೊರಜನಾಳ ಇತರರು ಇದ್ದರು.
ಸದಸ್ಯರ ಗೌರವಧನ ಪಾವತಿಸಿ
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಲ ಸದಸ್ಯರು, ತಮಗೆ ಬರಬೇಕಾದ ಗೌರವಧನ ಕೊಡಬೇಕು. ಕಳೆದ ೪ ತಿಂಗಳಿನಿಂದ ಗೌರವಧನ ಕೊಡುವುದು ಬಾಕಿ ಇದೆ. ಈ ಕುರಿತು ಪಿಡಿಒ ಅವರನ್ನು ಕೇಳಿದರೆ ಬೇರೆ ಕೆಲಸಕ್ಕೆ ಗೌರವಧನ ಬಳಸಿಕೊಂಡಿದ್ದೇವೆ. ಶೀಘ್ರ ಪಾವತಿಸುತ್ತೇವೆ ಎಂಬ ಉತ್ತರ ಹೇಳುತ್ತಾರೆ. ನಮಗೆ ಬಂದ ಹಣವನ್ನು ಬೇರೆಡೆ ಉಪಯೋಗಿಸುವುದು ಎಷ್ಟು ಸರಿ ಎಂದು ಗ್ರಾಪಂ ಸದಸ್ಯರಾದ ತುಳಚಪ್ಪ ಜಾಲಿಹಾಳ, ಮಲೀಕಸಾಬ ಕಲಬುರ್ಗಿ ಪ್ರಶ್ನಿಸಿದರು.