ಹುಬ್ಬಳ್ಳಿ: ದೇಶ ಡಿಜಿಲೀಕರಣದತ್ತ ಹೆಜ್ಜೆ ಹಾಕುತ್ತಿದೆ. ಪ್ರಪಂಚದ ಯಾವುದೇ ಮೂಲೆಯ ವಿಷಯವನ್ನು ಕ್ಷಣಾರ್ಧದಲ್ಲಿ ಬೆರಳ ತುದಿಯಿಂದ ನೋಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿ ಒಂದು ಸಣ್ಣ ದಾಖಲೆ ಪತ್ರಕ್ಕಾಗಿ ವಾರಗಟ್ಟಲೇ ಅಲೆದಾಡಬೇಕಾಗಿತ್ತು.
ಮುಂದಿನ ದಿನಗಳಲ್ಲಿ ಬೆರಳ ತುದಿಯಲ್ಲಿ ಭೂದಾಖಲೆಗಳನ್ನು ಜನರಿಗೆ ಸಿಗುವ ಹಾಗೇ ಮಾಡಲಾಗುತ್ತಿದೆ.ಹಿಂದೆ ತಹಶಿಲ್ದಾರ ಕಚೇರಿಯ ದಾಖಲೆ ಕೊಠಡಿಗಳನ್ನು ಪ್ರವೇಶಿಸಿದರೆ ದಶಕಗಳಷ್ಟು ಪುರಾತನವಾದ ಕಡತಗಳು ಸಿಗುತ್ತವೆ.
ಕೈ ಬರಹದ ಆ ದಾಖಲೆಗಳನ್ನು ಬಟ್ಟೆಯಲ್ಲಿ ಕಟ್ಟಿ ಇಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಅವುಗಳನ್ನು ಹುಡುಕಿ ಕೊಡುವುದೇ ದೊಡ್ಡ ಕೆಲಸ. ಧೂಳು ಕೊಡವಿ ಪತ್ತೆಹಚ್ಚುವ ಹೊತ್ತಿಗೆ ದಿನವೇ ಕಳೆದು ಬಿಡುತ್ತದೆ. ಅದಕ್ಕೆ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ.
ಅಷ್ಟೇ ಅಲ್ಲದೇ ಖೊಟ್ಟಿ ದಾಖಲೆ ಪತ್ರಗಳ ಹಾವಳಿ, ದಾಖಲೆ ತಿದ್ದುಪಡಿ ಪ್ರಕರಣ ಕೂಡ ಹೆಚ್ಚಾಗಿತ್ತು ಇದಕ್ಕೆ ಸರ್ಕಾರ ಇತಿಶ್ರೀ ಹಾಡಲು ಮುಂದಾಗಿದೆ.ಇದೀಗ ಭೂ ಸುರಕ್ಷಾ ಯೋಜನೆ ಮೂಲಕ ನೂರಾರು ವರ್ಷಗಳ ದಾಖಲೆ ಪತ್ರಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ಗಣಕೀಕರಣ ಮಾಡಲು ಮುಂದಾಗಿದೆ.