ಅಮೀನಗಡದಲ್ಲಿ ಶಾಂತಿ ಸಭೆ
ನಿಮ್ಮ ಸುದ್ದಿ ಬಾಗಲಕೋಟೆ
ಹಬ್ಬಗಳನ್ನು ಪರಸ್ಪರ ಪ್ರೀತಿ, ವಿಶ್ವಾಸದಿಂದ ಆಚರಿಸುವ ಮೂಲಕ ಪರೋಕ್ಷವಾಗಿ ಕಾನೂನು ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಹುನಗುಂದ ಸಿಪಿಐ ಕೆ.ಹೊಸಕೇರಪ್ಪ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಠಾಣೆ ವ್ಯಾಪ್ತಿಯ ಗ್ರಾಮಗಳ ಹಿಂದು-ಮುಸ್ಲಿಂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸದ್ಯ ಕೊರೊನಾ ಮಹಾಮಾರಿಯಿಂದಾಗಿ ಸಾಮೂಹಿಕ ಪ್ರಾರ್ಥನೆ ನಿಷೇಸಲಾಗಿದೆ. ಬಹುತೇಕ ಹಬ್ಬಗಳು ಸರಳತೆಗೆ ಮಹತ್ವ ನೀಡುತ್ತಿದ್ದು ಸಂಪ್ರದಾಯ ಮರೆಯದೆ ಬಕ್ರೀದ್ ಹಬ್ಬವನ್ನೂ ಸಹ ಸರಳವಾಗಿ ಆಚರಿಸಿ ಎಂದರು.
ಗೋಹತ್ಯೆ ನಿಷೇಧವಿದ್ದು ಇಲ್ಲಸಲ್ಲದ ವದಂತಿಗೆ ಕಿವಿಗೊಡಬೇಡಿ. ಕಾನೂನು ಕಾಪಾಡುವಲ್ಲಿ, ಅಪರಾಧ ಪತ್ತೆ ಹಾಗೂ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿನ ಕೆಲ ಸಣ್ಣ ಪುಟ್ಟ ಪೋಸ್ಟ್ಗಳು ದೊಡ್ಡ ಕೋಮು ಗಲಭೆಗೆ ಕಾರಣವಾಗುತ್ತವೆ. ಅವುಗಳಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಹಿರಿಯರು ಕಿರಿಯರಿಗೆ ಮಾರ್ಗದರ್ಶನ ಮಾಡಿ. ಪಟ್ಟಣ, ತಾಲೂಕು, ಜಿಲ್ಲೆಗೆ ಕಪ್ಪು ಚುಕ್ಕೆ ಬಾರದಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಹೇಳಿದರು.
ಎಸ್‌ಐ ಎಂ.ಜಿ.ಕುಲಕರ್ಣಿ, ಪಪಂ ಸದಸ್ಯ ವಿಜಯಕುಮಾರ ಕನ್ನೂರ, ಬಿ.ಎಸ್.ನಿಡಗುಂದಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಜ್ಮೀರ ಮುಲ್ಲಾ, ರೆಹಮಾನ್‌ಸಾಬ ದೊಡಮನಿ, ನಾಗೇಶ ಗಂಜಿಹಾಳ ಮಾತನಾಡಿದರು. ಪಪಂ ಅಧ್ಯಕ್ಷ ಸಂಗಪ್ಪ ತಳವಾರ, ಸದಸ್ಯ ಗುರುನಾಥ ಚಳ್ಳಮರದ, ಮುಖಂಡರಾದ ರಾಘವೇಂದ್ರ ಗೌಡರ, ಪಿ.ಜಿ.ಮೂಲಿಮನಿ, ಹಾಸೀಂಪೀರ ಫಿರಜಾದೆ, ರಾಜು ಕಿಟಕಿಮನಿ, ಜಗದೀಶ ರಗಟಿ, ದಾವಲಸಾಬ ಬಾಗೇವಾಡಿ, ಡಿ.ಪಿ.ಅತ್ತಾರ, ಪೀರಾ ಖಾದ್ರಿ ಇತರರು ಇದ್ದರು.
ಪಟ್ಟಣದಲ್ಲಿ ಜಾನುವಾರು ಸಂತೆ ಆರಂಭದ ಕುರಿತು ಸಭೆಯಲ್ಲಿ ಸೇರಿದ್ದ ನಿವಾಸಿಗಳ ಒತ್ತಾಯಿಸಿದರು. ಸಾವಿರಾರು ಜನರ ಜೀವನಕ್ಕೆ ಆಧಾರವಾದ ಜಾನುವಾರ ಸಂತೆ ಆರಂಭಕ್ಕೆ ತಾಲೂಕು ಆಡಳಿತ ಮುಂದಾಗಬೇಕು ಎಂದು ಮನವಿ ಮಾಡಿದರು. ಮನವಿ ಆಲಿಸಿದ ಸಿಪಿಐ ಕೆ.ಹೊಸಕೇರಪ್ಪ ಸಂತೆ ಆರಂಭದ ಕುರಿತು ಮೇಲಧಿಕಾರಿಗಳೊಂದಿಗೆ ಮಾತನಾಡಿ ಬಕ್ರೀದ್ ಹಬ್ಬದ ನಂತರ ಆರಂಭವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.