ಬಾಗಲಕೋಟೆ
ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ನನ್ನಿಂದ ಯಾವುದೇ ಅಡ್ಡಿ ಆಗಿಲ್ಲ, ಈ ವಿಷಯದಲ್ಲಿ ಮುಚಖಂಡಿ ವೀರಭದ್ರೇಶ್ವರ ಮತ್ತು ತುಳಸಿಗಿರಿ ಹನುಮಪ್ಪನ ಮುಂದೆ ಆಣೆ ಪ್ರಮಾಣಕ್ಕೆ ಸಿದ್ದ ಎಂದು ಮೇಲ್ಮನೆ ಸದಸ್ಯ ಪಿ.ಎಚ್.ಪೂಜಾರ ತಮ್ಮ ಟೀಕಾಕಾರರಿಗೆ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಅವರು ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ
ನನ್ನಿಂದ ಅಡ್ಡಿ ಆಗಿದೆ ಎನ್ನುವುದನ್ನು ಟೀಕಾಕಾರರು ಸಾಬೀತು ಪಡಿಸಿದಲ್ಲಿ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ, ಟೀಕಾಕಾರರರು ರಾಜಕೀಯ ನಿವೃತ್ತಿ ಘೋಷಣೆ ಮಾಡಲು ಸಿದ್ದರಿದ್ದಾರಾ ಎಂದು ಪ್ರಶ್ನಿಸಿದರು.
ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವವರು ಎಚ್ಚರದಿಂದ ಇರಬೇಕು. ಆರೋಪಕ್ಕೆ ಉತ್ತರ ನೀಡುತ್ತಿಲ್ಲ ಎನ್ನುವುದು ದೌರ್ಬಲ್ಯವಲ್ಲ. ಇನ್ನಾದರೂ ವೃಥಾ ಆರೋಪಗಳನ್ನು ಮಾಡುತ್ತ, ಸಮಾಜದಲ್ಲಿ ಒಡಕನ್ನುಂಟು ಮಾಡುವ ಕೆಲಸ ಬಿಡಬೇಕು ಎಂದರು.
ಬಾಗಲಕೋಟೆಯ ಬಿಜೆಪಿ ಪಾಳೆಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ವರಿಷ್ಠರು ಗಮನಿಸುತ್ತಿದ್ದಾರೆ. ತಾವು ಕೂಡ ವರಿಷ್ಠರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ ಅವರು ಬಾಲ್ಯದಿಂದಲೇ ಸಂಘ ಪರಿವಾರದಲ್ಲಿ ಬಂದವರು, ಆ ಸಿದ್ದಾಂತಕ್ಕೆ ಎಂದೂ ಅನ್ಯಾಯವಾಗಲು ಬಿಡುವುದಿಲ್ಲ. ತಮ್ಮ ವಿರುದ್ಧ ಹಿಂದು ವಿರೋಧಿ ಪಟ್ಟ ಕಟ್ಟುವ ಕೆಲಸ ನಡೆದಿದೆ ಎಂದು ದೂರಿದರು.
ಸಮಾಜ ಒಡೆಯುವ, ಸೌಹಾರ್ದ ವಾತಾವರಣ ಹಾಳು ಮಾಡುವ ಕೆಲಸ ಆಗಬಾರದು, ಇಂತಹ ಪ್ರಯತ್ನ ಇಂದೇ ಕೊನೆ ಆಗಬೇಕು. ನಿಜಾಂಶ ಏನು ಎಂದು ಜನತೆಗೆ ಗೊತ್ತಾಗಬೇಕು. ವ್ಯಕ್ತಿಯೊಬ್ಬರ ಮೇಲೆ ಯಾರೆ ಆಗಲಿ ಆರೋಪ ಮಾಡುವ ಮುನ್ನ ತಮ್ಮ ಬಗೆಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಶಿವಾಜಿ ಮಹಾರಾಜರ ಮೂರ್ತಿ ತೆರವು ಕೆಲಸ ಖಂಡನೀಯ, ಸರ್ಕಾರ ಸಮರಸ್ಯಕ್ಕೆ ಭಂಗ ತರುವ ಕೆಲಸ ಆಗಬಾರದಿತ್ತು. ಸರ್ಕಾರದ ನಡೆ ಖಂಡನೀಯ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೂರ್ತಿ ಪ್ರತಿಷ್ಠಾಪನೆ ಕುರಿತು ಚರ್ಚಿಸುವೆ ಎಂದು ಹೇಳಿದರು.
ಡಾ. ಮಾನೆ ಇದ್ದರು.