ವಿಜಯಪುರ
:ಅವಳಿ ಜಿಲ್ಲೆಯ ರೈತರಿಗೆ ಸವಿ ಸಕ್ಕರೆ ಪೂರೈಸುವ ಮೂಲಕ ರಾಜ್ಯದ ಮನೆ ಮಾತಾಗಿರುವ ಕೃಷ್ಣಾ ತೀರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ 17 ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಕೇವಲ 4 ದಿನ ಬಾಕಿ. ಕಣದಲ್ಲಿರುವ 38 ಅಭ್ಯರ್ಥಿಗಳು ಶತಾಯ-ಗತಾಯ ಗೆಲ್ಲಲೇಬೇಕೆಂಬ ಉಮೇದಿಯಿಂದ ಬಿರುಸಿನ ಪ್ರಚಾರಕ್ಕಿಳಿದಿದ್ದಾರೆ.
ವಿಜಯಪುರ-ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಈ ಕಾರ್ಖಾನೆಗೆ ಪ್ರತಿ ಚುನಾವಣೆಯಲ್ಲಿ ಎರಡು ಬಣಗಳು ಕಣಕ್ಕಿಳಿಯುತ್ತಿದ್ದವು. ಆದರೆ, ಈ ಬಾರಿ 3ನೇ ಬಣ ಅಸ್ತಿತ್ವಕ್ಕೆ ಬಂದಿದ್ದರಿಂದ ಕಾರ್ಖಾನೆ ಚುನಾವಣೆ, ಸಾರ್ವತ್ರಿಕ ಚುನಾವಣೆಯ ಕಾವು ಪಡೆದಿರುವುದು ವಿಶೇಷ.
ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯ ಚಮತ್ಕಾರ, ರಾಷ್ಟ್ರ ಪ್ರಶಸ್ತಿಯ ಪುರಸ್ಕಾರ
ಮೂರು ಬಣಗಳ ಜಿದ್ದಾಜಿದ್ದಿ
ಕಾರ್ಖಾನೆಯ ಹಾಲಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಮಾಜಿ ಅಧ್ಯಕ್ಷ ಕುಮಾರ ದೇಸಾಯಿ ಬಣಗಳ ಪರಂಪರಾಗತ ಸ್ಪರ್ಧೆ ಸಾಮಾನ್ಯಘಿ. ಆದರೆ, ಈ ಬಾರಿ ಅವರಿಬ್ಬರಿಗೂ ಠಕ್ಕರ್ ನೀಡಿ, ಕಾರ್ಖಾನೆ ವಶಪಡಿಸಿಕೊಳ್ಳಬೇಕೆಂಬ ಉಮೇದಿಯಿಂದ ಇದೇ ಮೊದಲ ಬಾರಿಗೆ ರಮೇಶ ಬಿದನೂರ ನೇತೃತ್ವದಲ್ಲಿ ನಂದಿ ಸಮಾನ ಮನಸ್ಕರ 3ನೇ ಬಣ ಅಸ್ತಿತ್ವಕ್ಕೆ ಬಂದಿದ್ದರಿಂದ ಚುನಾವಣೆ ರಂಗೇರಿದ್ದು ವಿಶೇಷ. ಹಾಗಾಗಿ ಮೂರು ಬಣಗಳ ಪೈಕಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಯಾರಿಗೆ ಮಣೆ ಹಾಕುತ್ತದೆ ಎಂಬುದು ಅವಳಿ ಜಿಲ್ಲೆಯ ಮತದಾರರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ನೇರಾನೇರ ಹಣಾಹಣಿ
ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷ ಬಿ.ಟಿ. ಪಾಟೀಲ ಶಿರಬೂರ ಅವರ ಪುತ್ರ ಶಶಿಕಾಂತಗೌಡ ಪಾಟೀಲ. ಈಗಾಗಲೇ 2 ಅವಧಿಗೆ ಅಧ್ಯಕ್ಷರಾಗಿದ್ದಾರೆ. ಈಗ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿಯುವ ಮೂಲಕ ಮತ ಯಾಚಿಸುತ್ತಿದ್ದಾರೆ.
ಕಾರ್ಖಾನೆಗೆ 5 ಬಾರಿಗೆ ನಿರ್ದೇಶಕ ಹಾಗೂ 1 ಬಾರಿ ಅಧ್ಯಕ್ಷರಾಗಿದ್ದ ಕುಮಾರ ದೇಸಾಯಿ ಅವರು ಶಶಿಕಾಂತಗೌಡರಿಗೆ ಸಾಂಪ್ರದಾಯಿಕ ಎದುರಾಳಿ. 2ನೇ ಬಾರಿಗೆ ಅಧ್ಯಕ್ಷರಾಗಲು ಅದೃಷ್ಟ ಪರೀಕ್ಷೆಗಿಳಿದು ಮತದಾರರ ಮನವೊಲಿಸುತ್ತಿದ್ದಾರೆ.
3 ಕುಟುಂಬಗಳ ರಾಜಕಾರಣವನ್ನು ಕಾರ್ಖಾನೆಯಿಂದ ಮುಕ್ತಗೊಳಿಸಬೇಕೆಂಬ ಉದ್ದೇಶದಿಂದ ಈ ಬಾರಿ ನಂದಿ ಸಮಾನ ಮನಸ್ಕರ ವೇದಿಕೆ ರಚಿಸಿಕೊಂಡು ರಮೇಶ ಬಿದನೂರ ನೇತೃತ್ವದ ಬಣ ಅದೃಷ್ಟ ಪರೀಕ್ಷೆಗಿಳಿದಿದೆ.
ಸೆ. 1 ರಂದು ಮತದಾನ
ಮೂರು ಬಣದವರು ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದ ಹೊಳೆಯಲ್ಲಿ ತೇಲಾಡುತ್ತಿದ್ದಾರೆ. ಆದರೆ ಸೆ. 1 ರಂದು ನಂದಿ ಅಂತಾರಾಷ್ಟ್ರೀಯ ಶಾಲೆಯ 2 ಬ್ಲಾಕ್‌ಗಳಲ್ಲಿ ನಡೆಯುವ ಚುನಾವಣೆಯಲ್ಲಿ 8168 ಮತದಾರರು ಯಾವ ಬಣಕ್ಕೆ ಆಶೀರ್ವದಿಸಿ, ಯಾರಿಗೆ ವಿಜಯದ ಕೊರಳ ಮಾಲೆ ಹಾಕುತ್ತಾರೆ ಎಂಬುದನ್ನು ಕಾಯ್ದು ನೋಡಬೇಕು.
ಹಿರಿಯರ ಜತೆಗೆ ಕಾರ್ಖಾನೆ ಸ್ಥಾಪಿಸಿದ ಮನೆತನ ನಮ್ಮದು. ನಮ್ಮ ತಂದೆಯವರೇ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ರೈತರ ಹಿತಕ್ಕೆ ನಾವು ಬದ್ಧರಾಗಿದ್ದೇವೆ. ಕಬ್ಬು ಬೆಳೆಗಾರರ ಪತ್ತಿನ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದೇನೆ. ರೈತರ ಅನುಕೂಲಕ್ಕಾಗಿ ರೈತ ಭವನ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಸಿಬಿಎಸ್‌ಇ ಅಂತಾರಾಷ್ಟ್ರೀಯ ಶಾಲೆ ನಿರ್ಮಿಸಿದ್ದೇನೆ. ಮತದಾರರು ನನ್ನ ಪರವಾಗಿದ್ದಾರೆ.
–ಶಶಿಕಾಂತಗೌಡ ಪಾಟೀಲ, ಹಾಲಿ ಅಧ್ಯಕ್ಷ.
5 ಬಾರಿ ನಿರ್ದೇಶಕ ಹಾಗೂ 1 ಬಾರಿ ಅಧ್ಯಕ್ಷ, ಉಪಾಧ್ಯಕ್ಷನಾಗಿ ಕಾರ್ಖಾನೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಭವಿಷ್ಯದ ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡುವ ಸಂಕಲ್ಪ ಮಾಡಿದ್ದೇನೆ. ಮತದಾರರು ಒಲವು ನನ್ನ ಮೇಲಿದೆ.
– ಕುಮಾರ ದೇಸಾಯಿ, ಮಾಜಿ ಅಧ್ಯಕ್ಷ.
ಎರಡೂ ಬಣಗಳ ಪರಂಪರಾಗತ ಅಧಿಕಾರದಲ್ಲಿ ಕಾರ್ಖಾನೆ ಸಿಲುಕಿದೆ. ಹಾಗಾಗಿ ಅವರಿಂದ ಕಾರ್ಖಾನೆ ಮುಕ್ತಗೊಳಿಸಿ, ಉತ್ತಮ ಆಡಳಿತ ನೀಡಲು ನಮ್ಮ ಬಣ ಕಣಕ್ಕಿಳಿದಿದ್ದುಘಿ, ಮತದಾರರು ಆಶೀರ್ವದಿಸುವ ವಿಶ್ವಾಸವಿದೆ.
– ರಮೇಶ ಬಿದನೂರ, 3ನೇ ಬಣದ ಮುಖಂಡ.