ಜಿಲ್ಲೆಯಾದ್ಯಂತ ೩೧ ಖರೀದಿ ಕೇಂದ್ರದಲ್ಲಿ ಬಿಳಿಜೋಳ ಖರೀದಿ
ನಿಮ್ಮ ಸುದ್ದಿ ಬಾಗಲಕೋಟೆ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಮಾಲ್ದಂಡಿ ಜೋಳವನ್ನು ಪ್ರತಿ ಕ್ವಿಂಟಲ್‌ಗೆ ೨೬೪೦ ರೂ.ಗಳಲ್ಲಿ ಖರೀದಿ ಪ್ರಕ್ರಿಯೆಯನ್ನು ರೈತರ ಹಿತದೃಷ್ಠಿಯಿಂದ ಹೋಬಳಿ ಮಟ್ಟದಲ್ಲಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಜಿಲ್ಲೆಯಲ್ಲಿ ಈಗಾಗಲೇ ಕೆ.ಎಫ್.ಸಿ.ಎಸ್ ಮೂಲಕ ೬ ಖರೀದಿ ಕೇಂದ್ರಗಳನ್ನು ತಾಲೂಕಿಗೆ ಒಂದರAತೆ ತೆರೆಯಲಾಗಿತ್ತು. ರೈತರ ಹಿತದೃಷ್ಠಿಯಿಂದ ಗ್ರಾಮೀಣ ಭಾಗದ ಹೋಬಳಿ ವ್ಯಾಪ್ತಿಯಲ್ಲಿ ಪಿಕೆಪಿಎಸ್, ವಿಎಸ್‌ಎಸ್‌ಎನ್, ಎಫ್‌ಪಿಓ, ಟಿಎಪಿಸಿಎಂಎಸ್ ಮೂಲಕ ಹೆಚ್ಚುವರು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಜೋಳ ಬಳಸುತ್ತಿರುವದರಿಂದ ಅಕ್ಕಿಯ ಜೊತೆ ಜೋಳ ನೀಡುವ ದೃಷ್ಠಿಯಿಂದ ಆಹಾರ ಇಲಾಖೆ ಸಚಿವರು ನಿರ್ದೇಶನ ನೀಡಿದ್ದು, ಬೆಂಬಲ ಬೆಲೆ ಯೋಜನೆಯಡಿ ೧.೬೦ ಲಕ್ಷ ಕ್ವಿಂಟಲ್ ಮಾಲ್ದಂಡಿ ಬಿಳಿ ಜೋಳ ಖರೀದಿಸುವ ಗುರಿ ಹೊಂದಲಾಗಿದೆ. ರೈತರು ಪ್ರತಿ ಎಕರೆಗೆ ೧೫ ಕ್ವಿಂಟಲ್‌ನಂತೆ ಖರೀದಿಸಲಾಗುತ್ತಿದೆ. ಖರೀದಿಗೆ ಯಾವುದೇ ಗರಿಷ್ಠ ಮಿತಿ ಇರುವದಿಲ್ಲ. ಗುಣಮಟ್ಟದ ಬಿಳಿ ಜೋಳವನ್ನು ೫೦ ಕೆಜಿ ಸಾಮರ್ಥದ ಗೋಣಿ ಚೀಲದಲ್ಲಿ ಖರೀದಿ ಕೇಂದ್ರಕ್ಕೆ ತರಬೇಕು. ಪ್ರತಿ ಚೀಲಕ್ಕೆ ೨೨ ರೂ.ಗಳಂತೆ ಹಾಗೂ ಖರೀದಿ ಮೊತ್ತವನ್ನು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಾಗುತ್ತಿದೆ ಎಂದು ತಿಳಿಸಿದರು.
ರೈತರು ನೊಂದಣಿಗೆ ಕೃಷಿ ಇಲಾಖೆಯಿಂದ ನೀಡಿರುವ ಪ್ರೂಟ್ಸ ಐಡಿ ನಂಬರನ್ನು ಖರೀದಿ ಕೇಂದ್ರದಲ್ಲಿ ನೀಡಬೇಕು. ನೊಂದಣಿ ಹಾಗೂ ಖರೀದಿಗೆ ಮಾರ್ಚ ೩೧ ಕೊನೆಯದಿನವಾಗಿದೆ. ಬಿಳಿ ಜೋಳ ಖರೀದಿ ಕುರಿತು ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತ, ಎಪಿಎಂಸಿ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ವಿತರಣೆ, ಬ್ಯಾನರ್ ಅಚಿಟಿಸಲು ಖರೀದಿ ಏಜೆನ್ಸಿಯವರಿಗೆ ಸೂಚಿಸಲಾಗಿದೆ. ಮಧ್ಯವರ್ತಿ, ಏಜೆಂಟರ ಸಹಾಯವಿಲ್ಲದೇ ನೇರವಾಗಿ ಮಾಹಿತಿ ಪಡೆದು ಬಿಳಿಜೋಳ ನೀಡತಕ್ಕದ್ದೆಂದರು. ಪತ್ರಿಕಾಗೋಷ್ಠಿಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ೩೧ ಖರೀದಿ ಕೇಂದ್ರ
ಬಾದಾಮಿ ತಾಲೂಕಿನಲ್ಲಿ ಕೆಎಫ್‌ಸಿಎಸ್‌ಸಿ ಬಾದಾಮಿ, ಪಿಕೆಪಿಎಸ್ ಕೆರೂರ, ಟಿ.ಎ.ಪಿ.ಸಿ.ಎಂ.ಎಸ್ ಬಾದಾಮಿ, ಕೆಎಫ್‌ಸಿಎಸ್‌ಸಿ ಗುಳೇದಗುಡ್ಡ, ಬಾಗಲಕೋಟೆ ತಾಲೂಕಿ ಕೆಎಫ್‌ಸಿಎಸ್‌ಸಿ, ಟಿ.ಎಪಿಸಿಎಂಎಸ್ ಬಾಗಲಕೋಟೆ, ಪಿಕೆಪಿಎಸ್ ಹಳ್ಳೂರ, ಅಚನೂರ, ಬೆನಕಟ್ಟಿ, ಇಲಕಲ್ಲ ತಾಲೂಕಿನ ಪಿಕೆಪಿಎಸ್ ಇಲಕಲ್ಲ, ನಂದವಾಡಗಿ, ಬೀಳಗಿ ತಾಲೂಕಿನ ಕೆಎಫ್‌ಸಿಎಸ್‌ಸಿ, ಟಿ.ಎಪಿ.ಸಿಎಂಎಸ್ ಬೀಳಗಿ, ಮುಧೋಳ ತಾಲೂಕಿನ ಕೆಎಫ್‌ಸಿಎಸ್‌ಸಿ, ಟಿ.ಎ.ಪಿ.ಸಿ.ಎಂ.ಎಸ್ ಮುಧೋಳ, ಹುನಗುಂದ ತಾಲೂಕಿನ ಕೆಎಫ್‌ಸಿಎಸ್‌ಸಿ, ಟಿ.ಎ.ಪಿ.ಸಿ.ಎಂ.ಎಸ್, ಪಿಕೆಪಿಎಸ್ ಹುನಗುಂದ, ಪಿಕೆ.ಪಿಎಸ್ ಕರಡಿ, ಕೂಡಲಸಂಗಮ, ಹಿರೇಆದಾಪೂರ, ಕಂದಗಲ್, ಬೂದಿಹಾಳ, ಎಫ್.ಪಿ.ಓ ಅಮರಾವತಿ, ಸೂಳೆಬಾವಿ, ಮೂಗನೂರ, ಪಿಕೆ.ಪಿಎಸ್ ಚಿಕ್ಕ ಸಿಂಗನಗುತ್ತಿ, ಜಮಖಂಡಿ ತಾಲೂಕಿನಲ್ಲಿ ಕೆಎಫ್‌ಸಿಎಸ್‌ಸಿ, ಟಿ.ಎಪಿ.ಸಿಎಂಎಸ್ ಜಮಖಂಡಿ, ಪಿಕೆಪಿಎಸ್ ಸಾವಳಗಿ, ಎಫ್‌ಪಿ.ಓ ತೊದಲಬಾಗಿ ಕೇಂದ್ರಗಳಲ್ಲಿ ಬಿಳಿ ಜೋಳ ಖರೀದಿಸಲಾಗುತ್ತದೆ.
ಕೋವಿಡ್ ಲಸಿಕೆ : ಶೇ.೭೮ ರಷ್ಟು ಸಾಧನೆ
ಜಿಲ್ಲೆಯಲ್ಲಿ ಕೋವಿಡ್-೧೯ ಲಸಿಕೆ ವಿತರಣೆಯಲ್ಲಿ ಮೊದಲನೇ ಮತ್ತು ಎರಡನೇ ಹಂತದಲ್ಲಿ ಶೇ.೭೮ ರಷ್ಟು ಸಾಧನೆ ಮಾಡಲಾಗಿದೆ. ಈಗ ೩ನೇ ಹಂತದ ಲಸಿಕಾಕಾರಣ ಆರಂಭಿಸಲಾಗಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ೭೩ ಲಸಿಕಾಕರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಆಸ್ಪತ್ರೆ, ೫ ತಾಲೂಕಾ ಆಸ್ಪತ್ರೆ, ೮ ಸಮುದಾಯ ಆರೋಗ್ಯ ಕೇಂದ್ರ, ೪೮ ಪ್ರಾಥಮಿಕ ಆರೋಗ್ಯ ಕೇಂದ್ರ, ೭ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ೪ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ೩ನೇ ಹಂತದಲ್ಲಿ ೪೫ ರಿಂದ ೫೯ ವರ್ಷದ ಅನಾರೋಗ್ಯ ಹೊಂದಿದವರು ಹಾಗೂ ೬೦ ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ೧.೫೪ ಲಕ್ಷ ೬೦ ವರ್ಷದ ಮೇಲ್ಪಟ್ಟವರಿದ್ದು, ಇದರಲ್ಲಿ ೧೧೦೪ ಜನ ಮಾತ್ರ ಲಸಿಕೆ ಪಡೆದಿದ್ದಾರೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ. ಆದ್ದರಿಂದ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮನವಿ ಮಾಡಿಕೊಂಡಿದ್ದಾರೆ.