ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಾಗೂ ಪೆನ್ಡ್ರೈವ್ ಪ್ರಕರಣದಲ್ಲಿ ಹಾಸನದಲ್ಲಿ ಎಸ್ಐಟಿ ದಾಳಿ ನಡೆಸಿರುವ ಬಗ್ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ಗೆ ಒಕ್ಕಲಿಗ ಜನಾಂಗ ತಿರುಗಿ ಬೀಳುತ್ತದೆಂಬ ಭಯ ಶುರುವಾಗಿದೆ. ಕಾಂಗ್ರೆಸ್ಸಿಗರಿಗೆ ಇರಿಸು ಮುರಿಸು ಆಗಿ ಹೀಗೆ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ತಿಮಿಂಗಿಲ ಇದೆ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ತಿಮಿಂಗಿಲ ಬಡಿದು ತಿಂದುಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಡಿದು ತಿನ್ನುವುದನ್ನು ದೇವೇಗೌಡರ ಕುಟುಂಬ ತೀರ್ಮಾನ ಮಾಡಬೇಕು. ದೇವೇಗೌಡರಿಗೆ ಈ ವಯಸ್ಸಿನಲ್ಲಿ ನೋವು ಕೊಡಬೇಕಿತ್ತಾ ಎಂದು ಒಕ್ಕಲಿಗ ಜನಾಂಗದವರು ಮಾತಾಡುತ್ತಿದ್ದಾರೆ. ಎಸ್ಐಟಿ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಹಾಗಾದರೆ ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್ಗಳಲ್ಲಿ ವೀಡಿಯೋ ಇಲ್ಲವೇ? ಅವರನ್ನು ಎಷ್ಟು ಜನರನ್ನು ಬಂಧಿಸಿದ್ದೀರರಿ? ಇದು ಕಾಂಗ್ರೆಸ್ನವರ ಮಾಸ್ಟರ್ ಪ್ಲಾನ್. ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಟ್ಟದಲ್ಲಿ ಪ್ರಕರಣದ ಮಾನಿಟರ್ ಆಗುತ್ತಿದೆ ಎಂದು ಅವರು ಹೇಳಿದರು.
ಪ್ರಕರಣದಲ್ಲಿ ಪ್ರಜ್ವಲ್ ಮಾಜಿ ಕಾರು ಚಾಲಕನಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಏಕೆ ಬಂಧಿಸಿಲ್ಲ? ಅವರಿಗೆ ಯಾಱರು ಬೇಕೋ ಅವರ ಮೇಲೆ ಆರೋಪ ಮಾಡುತ್ತಾರೆ. ಯಾರನ್ನು ವರ್ಗಾವಣೆ ಮಾಡಬೇಕೋ ಅದಕ್ಕೆ ಎಸ್ಐಟಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಎಸ್ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.