ಬೆಂಗಳೂರು: ‘ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ. ಬಹು ಸಂಖ್ಯಾತರ ಮೇಲೆ ಆರೋಪ ಬಂದರೆ ಕೂಡಲೇ ಕ್ರಮ ಕೈಗೊಳ್ಳಿ ಎಂಬುದಾಗಿ ಪೊಲೀಸ್ ಇಲಾಖೆಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನವಿದೆ’ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದರು.
ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದ ಪ್ರಜೆಯಾಗಿ ಇದೆಲ್ಲಾ ನಮ್ಮ ಮನಸ್ಸಿಗೆ ಬೇಸರ ತರಿಸಿದ್ದು, ಹಾಗಿದ್ದರೆ, ಈಗ ಕೇಳಿಬಂದಿರುವ ಎರಡೂ ಆರೋಪಗಳು ಸಾಬೀತಾದರೆ ಸರ್ಕಾರ ವಿಸರ್ಜನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಎರಡೂ ಕಡೆ ನಡೆದಿರುವುದು ಭಯೋತ್ಪಾದನಾ ಘಟನೆ ಆದರೆ ಸರ್ಕಾರದ ಎಲ್ಲರೂ ರಾಜೀನಾಮೆ ಕೊಡುತ್ತಾರಾ? ಉದ್ಯಮ ಸಂಘರ್ಷದಿಂದ ದಾಳಿ ಎಂದು ಹೇಳಿದ್ದು ಯಾರು? ಹೀಗೆ ಹೇಳಿದರೆ ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮುಂದುವರಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗೃಹಸಚಿವರು ಒತ್ತಡದಲ್ಲಿದ್ದಾರೆ. ಅವರು ಇದ್ದ ರಿಪೋರ್ಟ್ ಇದ್ದ ಹಾಗೆ ಕೊಡುವವರು. ಅವರ ಮೇಲೆ ಒತ್ತಡ ಇರುವುದು ಸತ್ಯ. ಹಾಗಾಗಿ ರಿಪೋರ್ಟ್ ಕೊಟ್ಟೇ ಇಲ್ಲ ಅಂತ ಹೇಳಿಬಿಡಿ ಎಂದು ಪೊಲೀಸರಿಗೆ ಹೇಳಿರುತ್ತಾರೆ. ನಾನೂ ಕೂಡ ಗೃಹಸಚಿವ ಆಗಿದ್ದವನು. ವರದಿಯಲ್ಲಿ ದಿನಾಂಕ ಹಾಕಿರುತ್ತಾರೆ ಎಂದರು.
ಅವರು ಮ್ಯಾನೇಜ್ ಮಾಡುತ್ತಿದ್ದಾರೆ ಅಷ್ಟೆ ಎಂದು ಪ್ರತಿಪಕ್ಷ ನಾಯಕ ದೂರಿದ್ದು, ನಿಮ್ಮ ಮನಸ್ಥಿತಿಗೆ ನೊಬೆಲ್ ಪ್ರಶಸ್ತಿಯನ್ನೇ ಕೊಡಬೇಕು. ಗೃಹ ಸಚಿವರು ಈಗ ಯಾರದ್ದೋ ಹಿತಾಸಕ್ತಿಯ ಕೈವಾಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ ಎಂದು ತಿಳಿಸಿದರು.