ಬೆಂಗಳೂರು: ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಇದನ್ನೇ ನ್ಯಾಯಾಲಯದಲ್ಲಿ ತಿಳಿಸಲಾಗಿದೆ. ಈ ವಿಷಯವನ್ನು ತಮಗೆ ಸಿಕ್ಕಿದ ಜಯ ಎಂದು ಸಿಎಂ ಸಿದ್ದರಾಮಯ್ಯ ಸುಳ್ಳು ಬಿಂಬಿಸುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆಗೆ ಅನುಮತಿಗಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ತಿಳಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ವೇಳೆಯೂ ಇದನ್ನು ತಿಳಿಸಲಾಗಿದೆ ಎಂದರು.
ಆದರೆ ಕಾಂಗ್ರೆಸ್ ನಾಯಕರು ಜಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆಗಾಗಿಯೇ ಅನುಮತಿ ಕೇಳಿರುವಾಗ ಕಾಂಗ್ರೆಸ್ ಪಾತ್ರ ಇದರಲ್ಲಿ ಏನೂ ಇಲ್ಲ. ಜಯ ಸಿಗಲು ಕಾಂಗ್ರೆಸ್‌ನ ವಕೀಲರು ಏನೂ ವಾದ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಾಂಗಲ್ಯ ಕುರಿತು ನೀಡುವ ಹೇಳಿಕೆ ಸರಿಯಾಗಿಯೇ ಇದೆ. ಹಿಂದೆ ಮನಮೋಹನ್ ಸಿಂಗ್ ಅವರು ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ ಬಗ್ಗೆ ಹೇಳಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಪಾಪರ್ ಆಗಿ ಬೀದಿಗೆ ಬಂದಿದ್ದು, ಮುಂದೆ ಸಂಬಳ ಕೊಡಲು ಹಣ ಇರುವುದಿಲ್ಲ. ಕಾಂಗ್ರೆಸ್ ವಿರುದ್ಧ ಹಿಂದೂಗಳು ಕೆರಳುತ್ತಿದ್ದಾರೆ. ಹಿಂದೂಗಳ ರಕ್ತವನ್ನು ಮತಾಂಧರು ಹರಿಸುತ್ತಿದ್ದು,ಮರೆ ಮಾಚಿಸಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ನೇಹಾ ಹತ್ಯೆಯ ತನಿಖೆಯನ್ನು ಸಿಬಿಐಗೆ ಕೊಡದೆ ಸಿಐಡಿಗೆ ನೀಡಿ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಅವರ ತಂದೆಯೇ ಲವ್ ಜಿಹಾದ್ ಹೇಳಿದ್ದಾರೆ. ಈ ಪ್ರಕರಣವನ್ನು ಸೂಕ್ತವಾಗಿ ತನಿಖೆ ಮಾಡಲು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ಸುರ್ಜೇವಾಲಾ ಅವರು ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ? ಇಲ್ಲಿ ಬಾಂಬ್ ಸ್ಫೋಟ ಆಗಿರುವಾಗ ನಿಮಗೆ ಮತ ಕೇಳಲು ಯಾವ ಅಧಿಕಾರ ಇದೆ? ಕೇಂದ್ರ ಸರ್ಕಾರ ಕ್ರಮ ವಹಿಸಿದ್ದರಿಂದಲೇ ಬರ ಪರಿಹಾರ ಹಲವಾರು ರಾಜ್ಯಗಳಿಗೆ ದೊರೆಯುತ್ತಿದೆ. ಈಗಾಗಲೇ ಬರ ಪರಿಹಾರವನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಬೇಕಿತ್ತು. ಎಸ್‌ಡಿಆರ್‌ಎಫ್‌ನಿಂದ 700 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯ ಸರ್ಕಾರವೇ ನೀಡಿದಂತೆ ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ ಎಂದು ಸೂಚಿಸಿದರು.