ಬೆಂಗಳೂರು: `ತಮ್ಮ ಆಪ್ತ ಸಚಿವ ಕೆಎನ್ ರಾಜಣ್ಣ ಅವರು ಹೇಳಿದಂತೆ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ ಸಿಎಂ ಸಿದ್ದರಾಮಯ್ಯನವರೇ?’ಇದು ವೀಕ್ ಪಿಎಂ, ಸ್ಟ್ರಾಂಗ್ ಸಿಎಂ ಎಂದು ಸಿದ್ದರಾಮಯ್ಯನವರ ಲೇವಡಿಗೆ ವಿಪಕ್ಷ ನಾಯಕ ಆರ್ ಅಶೋಕ್ ಸವಾಲು ಎಸೆದರು.
ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದಲ್ಲಿ ಮಾತ್ರ ಸರ್ಕಾರ ನಡೆಸಲು ನೈತಿಕತೆ ಇರುತ್ತದೆ ಎಂಬ ಸಚಿವ ಕೆಎನ್ ರಾಜಣ್ಣ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದರು.
ತಾವು ಸ್ಟ್ರಾಂಗ್ ಮುಖ್ಯಮಂತ್ರಿನೋ ಅಥವಾ ವೀಕ್ ಮುಖ್ಯಮಂತ್ರಿನೋ ಅಂತ ಜೂನ್ 4ರಂದು ಗೊತ್ತಾಗಲಿದೆ ಎಂದು ಲೇವಡಿ ಮಾಡಿದ್ದು, ಈ ವಿಚಾರವಾಗಿ ಈಗಾಗಲೇ ಬಿಕೆ ಹರಿಪ್ರಸಾದ್ ಬಂಡಾಯ, ಡಿಕೆ ಶಿವಕುಮಾರ್ ಅವರ ಬಣಗಳ ವಿಚಾರಗಳನ್ನು ಪ್ರಸ್ತಾಪಿಸಿದ್ದ ಅವರು ತಾಕತ್ತಿದ್ದರ ನಾನೇ 5 ವರ್ಷ ಸಿಎಂ ಎಂದು ಹೇಳಿ ನೋಡಿ ಎಂದು ಸವಾಲು ಹಾಕಿದ್ದು, ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಅವರನ್ನು ಕೆಣಕಿದರು.
ಯಾವ ಸೀಮೆ ‘ಸ್ಟ್ರಾಂಗ್ ಸಿಎಂ’?ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸಿಟಿ ರವಿ ಮತ್ತು ಪ್ರೀತಂ ಗೌಡ ಅವರು ಸಹ ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದು, `ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಯಾರು ಅಂದರೆ, ಸಿಎಂ ಸಿದ್ದರಾಮಯ್ಯ ಅವರು ಅಂತ ವಿಧಾನಸೌಧದ ಪ್ರತಿ ಕಂಬಗಳೂ ಹೇಳುತ್ತವೆ.
ಸಿಎಂ ವಿರೋಧಿ ಬಣದವರು ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಸೇರಿ ಸಿದ್ದರಾಮಯ್ಯನವರ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಾ ತೇಜೋವಧೆ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗದಷ್ಟು ಅಸಹಾಯಕ ಸಿಎಂ ನೀವು. ನಿಮ್ಮದೇ ಶಾಸಕರು ನಿಮ್ಮ ವಿರುದ್ಧ ಮಾತನಾಡಿದರೂ ಹದ್ದುಬಸ್ತಿನಲ್ಲಿಡಲಾಗದೆ ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನೀವು ಈಗ ನಾನೇ ಬಲಶಾಲಿ, ಶಕ್ತಿಶಾಲಿ ಎಂದು ಕೂಗುವುದು ಅರಣ್ಯ ರೋಧನೆ ಎಂಬುದು ನಿಮ್ಮ ಪಕ್ಷದವರಿಗೆ ತಿಳಿದಿದೆ ಬಿಡಿ ಎಂದು ಕಿಡಿಗಾರಿದರು.