ಬಾಗಲಕೋಟೆ
ಪರಸ್ಪರ ಸಹಕಾರ, ಸೌಹಾರ್ದತೆಯೊಂದಿಗೆ ರಂಜಾನ್ ಹಾಗೂ ಯುಗಾದಿ ಬಣ್ಣದಾಟ ನಡೆಯಬೇಕು ಎಂದು ಎಸ್‌ಐ ಶಿವಾನಂದ ಸಿಂಗನ್ನವರ ಹೇಳಿದರು.
ಯುಗಾದಿ ಬಣ್ಣದಾಟ ಹಾಗೂ ರಂಜಾನ್ ಹಬ್ಬ ಒಟ್ಟೊಟ್ಟಿಗೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಯುಗಾದಿ ಹಬ್ಬದ ವೇಳೆ ಬಣ್ಣದಾಟ ನಡೆಯುತ್ತಿರುವುದು ಸಾಮಾನ್ಯ. ಆದರೆ ಈ ವರ್ಷ ರಂಜಾನ್ ಹಬ್ಬ ಇರುವುದರಿಂದ ಪರಸ್ಪರರ ದಾರ್ಮಿಕತೆಗೆ ಯಾವುದೇ ಧಕ್ಕೆ ಬರದಂತೆ ಹಬ್ಬ ಆಚರಿಸಬೇಕು ಎಂದರು.
ಏ.೧೦ ಹಾಗೂ ೧೧ ರಂದು ಬಣ್ಣದಾಟವಿದ್ದು ಈ ಎರಡು ದಿನದಲ್ಲಿ ಒಂದು ದಿನ ರಂಜಾನ್ ಹಬ್ಬವಿದೆ. ಹೀಗಾಗಿ ಯಾವ ದಿನ ರಂಜಾನ್ ಹಬ್ಬವಿರುತ್ತದೆಯೋ ಅಂದು ಹಬ್ಬಕ್ಕೆ ಚ್ಯುತಿ ಬರದಂತೆ ಬಣ್ಣದಾಟವಿರಬೇಕು. ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆ ನಂತರದಲ್ಲಿ ಬಣ್ಣದಾಟ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮುಖ್ಯ. ಜತೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ. ಸೈಬರ್ ಅಪರಾಧದ ಬಗ್ಗೆಯೂ ಜಾಗೃತರಾಗಿರಿ ಎಂದು ಹೇಳಿದರು.
ಪೀರಾ ಖಾದ್ರಿ, ಅಮರೇಶ ಮಡ್ಡಿಕಟ್ಟಿ, ಪಿ.ಜಿ.ಮೂಲಿಮನಿ ಹಬ್ಬದ ಕುರಿತು ಮಾತನಾಡಿದರು. ಎಎಸ್‌ಐಗಳಾದ ಎಸ್.ಎಚ್.ಹೊಕ್ರಾಣಿ, ವಿ.ವೈ.ಪಾಟೀಲ, ಸಿಬ್ಬಂದಿ ರವಿ ದಾಸರ, ಹನಮಂತ ಆಡಗಲ್, ಪಪಂ ಸದಸ್ಯ ಸಂತೋಷ ಕಂಗಳ, ತುಕಾರಾಮ ಲಮಾಣಿ, ಮುಖಂಡರಾದ ಡಿ.ಪಿ.ಅತ್ತಾರ, ರವಿ ರಾಠೋಡ, ಚಂದ್ರು ಲಮಾಣಿ, ಬಸವಾನಂದ ಯಡ್ರಾಮಿ, ಸಂಗು ಮಠ, ಮಿಯಾಸಾಬ ಪಿಂಜಾರ, ರಮೇಶ ರಾಮವಾಡಗಿ ಇತರರು ಇದ್ದರು.