ನವದೆಹಲಿ: ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7ರಷ್ಟು ಬೆಳೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಇಂದು ಗುರುವಾರ (ಮೇ 30) ಆರ್ಬಿಐ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ಈ ಅಂದಾಜು ಮಾಡಲಾಗಿದೆ. ಈ ವರದಿ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.6ರಷ್ಟು ಹೆಚ್ಚಬಹುದು ಎಂದು ಹೇಳಲಾಗಿದೆ.
ದಿ ಮಿಂಟ್ ಪತ್ರಿಕೆ ನಡೆಸಿದ ವಿವಿಧ ಆರ್ಥಿಕ ತಜ್ಞರ ಸಮೀಕ್ಷೆಯಲ್ಲಿ ಸರಾಸರಿ ಪರಿಗಣಿಸಿದಾಗ 2023-24ರ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ. 7.9ರಷ್ಟು ಬೆಳೆಯುವ ಸಾಧ್ಯತೆ ಕಂಡುಬಂದಿದೆ. ಇದು ಆರ್ಬಿಐ ಮಾಡಿದ ಅಂದಾಜಿಗಿಂತಲೂ ತುಸು ಹೆಚ್ಚಿದೆ. 2023-24ರ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ನಿರೀಕ್ಷೆಮೀರಿ ಹೆಚ್ಚಿನ ಮಟ್ಟದಲ್ಲಿ ಇತ್ತು ಎಂಬುದು ಗಮನಾರ್ಹ.
ಅನುಕೂಲಕರವಾದ ಸ್ಥೂಲ ಆರ್ಥಿಕ ಮತ್ತು ಹಣಕಾಸು ಸ್ಥಿರತೆಯ ವಾತಾವರಣದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ವೇಗವನ್ನು ಮುಂದಿನ ದಶಕದಲ್ಲಿ ಹೆಚ್ಚಿಸಿಕೊಳ್ಳಲು ಆಗುತ್ತದೆ ಎಂದು ಆರ್ಬಿಐನ ವರದಿ ಹೇಳಿದೆ.
‘ನಿರಂತರ ಜಾಗತಿಕ ರಾಜಕೀಯ ಪ್ರಕ್ಷುಬ್ದತೆ ಮತ್ತು ಅಸ್ಥಿರ ಹಣಕಾಸು ಮಾರುಕಟ್ಟೆಯ ಪರಿಸ್ಥಿತಿಗಳ ಮಧ್ಯೆ ಭಾರತದ ಆರ್ಥಿಕತೆ 2023-24ರಲ್ಲಿ ಪ್ರತಿರೋಧ ಶಕ್ತಿ ತೋರ್ಪಡಿಸಿದೆ. ನಿರ್ದಿಷ್ಟ ಹಣಕಾಸು ನಿಲುವು, ಸರಬರಾಜು ನಿರ್ವಹಣೆ ಕ್ರಮ ಇತ್ಯಾದಿ ಮೂಲಕ ಹಣದುಬ್ಬರವನ್ನು ತಾಳಿಕೆಯ ಮಿತಿಯೊಳಗೆ ನಿಲ್ಲಿಸಲಾಗಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇವತ್ತು ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7ರಷ್ಟು ಬೆಳೆದಿತ್ತು. ಸತತ ಮೂರು ವರ್ಷ ಜಿಡಿಪಿ ಶೇ. 7ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಹೊಂದುತ್ತಿರುವಂತಿದೆ.