ಬೆಂಗಳೂರು: ತವರಿನ ಅಂಗಣದಲ್ಲಿ ನಡೆಯುತ್ತಿರುವ ಉಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿ ತಂಡ ಬೆಂಬಲಿಸುತ್ತಿರುವ ಅಪಾರ ಅಭಿಮಾನಿಗಳಿಗೆ ನಾಯಕಿ ಸ್ಮೃತಿ ಮಂಧಾನ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರವರಿ 29 (ಗುರುವಾರ)ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಮಂಧಾನ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದಲ್ಲಿ ನೆರೆದಿರುವ ಅಪಾರ ಜನಸ್ತೋಮ ನೀಡುತ್ತಿರುವ ಬೆಂಬಲವನ್ನು ಗಮನಿಸಿದರೆ ನಮಗೆ ಹೆಚ್ಚುವರಿಯಾಗಿ 10 ರನ್ ಗಳಿಸಿದ ಭಾವನೆ ಮೂಡುತ್ತಿದೆ ಎಂದು ಆರ್‌ಸಿಬಿ ನಾಯಕಿ ಹೇಳಿದ್ದಾರೆ.ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣವಾಗಿ ಮುಂಬೈನಲ್ಲಿ ನಡೆದಿತ್ತು. ಆದರೆ ಈ ಬಾರಿ ಹೋಮ್ ಅಂಡ್ ಅವೇ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದೆ.
ಆರ್ ಸಿಬಿ ಇದೇ ಮೊದಲ ಬಾರಿ ತವರಿನ ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡುತ್ತಿದ್ದು, ಅಭಿಮಾನಿಗಳು ಸಾಗರೋಪಾದಿಯಾಗಿ ಕ್ರೀಡಾಂಗಣಕ್ಕೆ ಆಗಮಿಸಿ ಆರ್ ಸಿಬಿ ತಂಡದ ಆಟಗಾರ್ತಿಯರನ್ನು ಹುರಿದುಂಬಿಸುತ್ತಿದ್ದಾರೆ.”ಆರ್‌ಸಿಬಿ ಅಭಿಮಾನಿಗಳ ಮುಂದೆ ಪಂದ್ಯವಾಡಲು ನಿಜಕ್ಕೂ ರೋಮಾಂಚನ ಆಗುತ್ತಿದೆ. ಕ್ರೀಡಾಂಗಣದಲ್ಲಿ ಆರ್ ಸಿಬಿ ಆರ್‌ಸಿಬಿ ಎಂದು ಮೊಳಗುತ್ತಿರುವ ಘೋಷಗಳು ನಮ್ಮಲ್ಲಿ ಹುಮ್ಮಸ್ಸು ಮೂಡಿಸುತ್ತಿದೆ.
ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಮೈದಾನಕ್ಕೆ ಬರುತ್ತಿದ್ದು, ಅವರ ಬೆಂಬಲದಿಂದ ಹೆಚ್ಚುವರಿಯಾಗಿ 10 ರನ್ ಗಳಿಸುತ್ತಿದ್ದೇವೆ ಎಂಬ ಭಾವನೆ ಮೂಡುತ್ತಿದೆ. ನಿಜಕ್ಕೂ ಅವರಿಗೆ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತೇನೆ,” ಎಂದು ಆರ್ ಸಿಬಿ ನಾಯಕಿ ಹೇಳಿದ್ದಾರೆ.