ಶಿವಮೊಗ್ಗ: ಬಿಜೆಪಿ ವಿರುದ್ಧ ಬಂಡಾಯ ಘೋಷಿಸಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಿಜೆಪಿಗೆ ಶಿಕಾರಿಪುರದಲ್ಲೇ ನಡುಕ ಹುಟ್ಟಿಸಿದ್ದು, ಶಿಕಾರಿಪುರ ಈಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರು ಕ್ಷೇತ್ರವಷ್ಟೇ ಅಲ್ಲ;
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿನಿಧಿಸುವ ಕ್ಷೇತ್ರವಾಗಿದೆ.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣವನ್ನು ತೊಲಗಿಸುತ್ತೇನೆ ಎಂದು ಶಪಥ ಮಾಡಿರುವ ಈಶ್ವರಪ್ಪ ಶಿಕಾರಿಪುರದಲ್ಲೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಶಿವಮೊಗ್ಗದಲ್ಲಿ ಈಶ್ವರಪ್ಪರನ್ನು ಬೆಂಬಲಿಸುವವರು ಇದ್ದರೂ ಶಿಕಾರಿಪುರದಲ್ಲಿ ಅವರಿಗೆ ನಿರೀಕ್ಷಿತ ಬೆಂಬಲ ಸಿಗಲಾರದು ಎಂಬ ಮಾತುಗಳು ಬಿಜೆಪಿ ಮುಖಂಡರಿಂದ ಕೇಳಿಬಂದಿದ್ದವು.
ಭಾನುವಾರ ಶಿಕಾರಿಪುರದಲ್ಲಿಈಶ್ವರಪ್ಪ ಮತ್ತು ಅವರ ಪುತ್ರ ಕೆಇ ಕಾಂತೇಶ್ ನಡೆಸಿದ ರ‍್ಯಾಲಿ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ.
ದೊಡ್ಡ ಸಂಖ್ಯೆಯಲ್ಲಿ ಜನ ಸೇರದೆ ಇರಬಹುದು. ಆದರೆ ಸುಮಾರು 500 ಜನರು ಪಾಲ್ಗೊಂಡಿದ್ದರು. ರ‍್ಯಾಲಿಯಲ್ಲಿ ಸೇರಿದ್ದ ಜನಸ್ತೋಮ ಮತ್ತು ಅದ್ಧೂರಿಯು ಶಿಕಾರಿಪುರದಲ್ಲಿ ಈಶ್ವರಪ್ಪರನ್ನು ಬೆಂಬಲಿಸುವವರು ಇಷ್ಟೊಂದು ಜನ ಇದ್ದಾರಾ ಎಂದು ಬಿಜೆಪಿಗರೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.ಸಂಘಟನೆ ಮಾಡದಿದ್ದರೂ, ಜನ ಸೇರಿಸಲು ಕಾರ್ಯಕರ್ತರು ಇಲ್ಲದಿದ್ದರೂ ಕೇವಲ ಒಂದು ಕರೆಗೆ ನೂರಾರು ಜನ ಸೇರಿರುವುದು ಅಚ್ಚರಿ ಮೂಡಿಸಿದೆ. ಈ ಸಂಗತಿಯು ಚುನಾವಣೆಯಲ್ಲಿ ಈಶ್ವರಪ್ಪರನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.