ಬಾಗಲಕೋಟೆ:
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್.ಐ.ವಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗುತ್ತಿದ್ದು, ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಶೇ.1.15 ರಿಂದ ಶೇ.0.76ಕ್ಕೆ ಇಳಿಮುಖವಾದರೆ, ಗರ್ಭಿಣಿಯರಲ್ಲಿ ಶೇ.0.06 ರಿಂದ ಶೇ.0.05ಕ್ಕೆ ಇಳಿಮುಖವಾಗಿರುವುದು ಕಂಡುಬಂದಿದೆ ಎಂದು ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 12 ಎಚ್.ಐವಿ ಸಮಾಲೋಚನೆ & ಪರೀಕ್ಷಾ ಕೇಂದ್ರಗಳು, 60 ಏಫ್ ಐಸಿಟಿಸಿ ಕೇಂದ್ರಗಳು, ಖಾಸಗಿ ಸಹಭಾಗಿತ್ವದಲ್ಲಿ 32 ಕೆಂದ್ರಗಳಿವೆ. 4 ಎಆರ್‍ಟಿ ಕೇಂದ್ರಗಳು, ಜಿಲ್ಲೆಯಲ್ಲಿ ಒಟ್ಟು 3 ಲೈಂಗಿಕ ರೋಗ ಪತ್ತೆ ಕೇಂದ್ರ (ಸುರಕ್ಷಾ ಕ್ಲಿನಿಕ್) ಗಳಿದ್ದು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆ, ಮುಧೋಳ ಮತ್ತು ಜಮಖಂಡಿಯಲ್ಲಿ ತಲಾ ಒಂದು ಇವೆ. ಮೂರು ಗುರಿ ಆಧಾರಿತ ಕಾರ್ಯಕ್ರಮ, 2 ಸಮುದಾಯ ಆರೋಗ್ಯ ಆರೈಕೆ ಕೇಂದ್ರಗಳು, ಜಿಲ್ಲೆಯಲ್ಲಿ 11 ರಕ್ತನಿಧಿ ಕೇಂದ್ರಗಳಿದ್ದು, ಅದರಲ್ಲಿ ಒಂದು ಸರಕಾರಿ ಉಳಿದ 10 ಖಾಸಗಿ ರಕ್ತನಿಧಿ ಕೇಂದ್ರಗಳಾಗಿವೆ. ಸದ್ಯ ಜಿಲ್ಲೆಯಲ್ಲಿ 17342 ಜನ ಎ.ಆರ್.ಟಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಮಾಣದಲ್ಲಿ ಕಳೆದ ಸಾಲಿನಿಂದ ಅಕ್ಟೋಬರ-23ರ ಅಂತ್ಯಕ್ಕೆ ಬಾಗಲಕೋಟ ತಾಲೂಕಿನ ಸಾಮಾನ್ಯರಲ್ಲಿ ಶೇ.0.84 ರಿಂದ 0.59ಕ್ಕೆ ಇಳಿಕೆಯಾದರೆ, ಗರ್ಭಿಣಿರಲ್ಲಿ ಶೇ.0.7 ರಿಂದ 0.8 ಕ್ಕೆ ಏರಿಕೆಯಾಗಿದೆ, ಜಮಖಂಡಿ ಸಾಮಾನ್ಯರಲ್ಲಿ ಶೇ.1.36 ರಿಂದ ಶೇ.1.1, ಗರ್ಭಿಣಿಯರಲ್ಲಿ ಶೇ.0.06 ರಿಂದ ಶೇ.0.3, ಮುಧೋಳ ಸಾಮಾನ್ಯರಲ್ಲಿ ಶೇ.1.64 ರಿಂದ ಶೇ.1.06ಕ್ಕೆÉ, ಗರ್ಭಿಣಿಯರಲ್ಲಿ ಶೇ.0.12 ರಿಂದ ಶೇ.0.03, ಬಾದಾಮಿ ಸಾಮಾನ್ಯರಲ್ಲಿ ಶೇ.0.49 ರಿಂದ ಶೇ.0.64ಕ್ಕೆ, ಗರ್ಭಿಣಿಯರಲ್ಲಿ ಶೇ.0.03 ರಿಂದ ಶೇ.0.6ಕ್ಕೆ ಏರಿಕೆಯಾಗಿದೆ. ಹುನಗುಂದ ಸಾಮಾನ್ಯರಲ್ಲಿ ಶೇ.0.43 ರಿಂದ ಶೇ.0.38ಕ್ಕೆ ಇಳಿಕೆಯಾದರೆ, ಗರ್ಭಿಣಿಯರಲ್ಲಿ ಶೇ.0.03 ರಿಂದ ಶೇ.0.04ಕ್ಕೆ ಏರಿಯಾಗಿದೆ. ಬೀಳಗಿ ಸಾಮಾನ್ಯರಲ್ಲಿ ಶೇ.1.04 ರಿಂದ ಶೇ.0.83ಗೆ ಇಳಿಕೆಯಾದರೆ, ಗರ್ಭಿಣಿಯರಲ್ಲಿ ಶೇ.0.06 ರಿಂದ ಶೇ.0.13ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಜಿಲ್ಲೆಯಲ್ಲಿ ಎಚ್‍ಐವಿ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ, ಮ್ಯಾರಥಾನ್, ನಾಟಕ ಸ್ಪರ್ಧೆ, ರೀಲ್ಸ್ ಸ್ಪರ್ಧೆ, ರೆಡ್ ರಿಬ್ಬನ್ ಕ್ಲಬ್ ಕಾರ್ಯ ಚಟುವಟಿಕೆಗಳು, 260 ಪ್ರೌಢಶಾಲೆ ಮತ್ತು 60 ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹದಿಹರೆಯದ ಶಿಕ್ಷಣ, ರಸಪ್ರಶ್ನೆ ಕಾರ್ಯಕ್ರಮ, ರಕ್ತದಾನ ಶಿಬಿರ, ರಕ್ತದಾನಿಗಳ ದಿನಾಚರಣೆ, ಹೋಡ್ಲಿಂಗ್ಸ್, ಗೋಡೆ ಬರಹ ಪಂಚಾಯತ ಸದಸ್ಯರಿಗೆ ಮಾಹಿತಿ ಕಾರ್ಯಾಗಾರ, ಕೈಗಾರಿಕಾ ಕಾರ್ಮಿಕರಿಗೆ ಅರಿವು ಕಾರ್ಯಾಗಾರ ಹಾಗೂ ರೋಡಿಯೋ ಕಾರ್ಯಕ್ರಮಗಳ ಮೂಲಕ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು 1988 ರಿಂದ ಡಿಸೆಂಬರ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಯೋಜಿಸುತ್ತಾ ಬಂದಿದ್ದು, 2011 ರಿಂದ ಎಚ್‍ಐವಿ/ಏಡ್ಸ್ ಸೋಂಕನ್ನು ಸೋನ್ನೆಗೆ ತರಲು ಎಚ್‍ಐವಿ/ಏಡ್ಸ್‍ನಿಂದ ಉಂಟಾಗುತ್ತಿರುವ ಸಾವನ್ನು ಸೊನ್ನೆಗೆ ತರಲು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ವರ್ಷ ಎಚ್‍ಐವಿ ಸೋಂಕಿನ ತಡೆಗಾಗಿ “ಸಮುದಾಯಗಳು ಮುನ್ನಡೆಸಲಿ” ಘೋಷಣೆಯಡಿ ಏಡ್ಸ್ ದಿನ ಆಚರಿಸಲಾಗುತ್ತಿದೆ. ಎಚ್‍ಐವಿ ಸೋಂಕಿತರ ಜೀವನದಲ್ಲಿ, ಸಮಾಜದಲ್ಲಿ ಹಾಗೂ ವಿಶ್ವದಲ್ಲಿ ಇತರೆಡೆ ಆಗುತ್ತಿರುವ ಆಗು ಹೋಗುಗಳ ಬಗ್ಗೆ ನಾವೆಲ್ಲಾ ತಿಳಿಯುವ ಅವಕಾಶ ವಿಶ್ವ ಏಡ್ಸ್ ದಿನವಾಗಿದೆ ಎಂದು ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
*ವಿಶ್ವ ಏಡ್ಸ್ ದಿನ : ಜಾಗೃತಿ ಜಾಥಾ*
—————————–
ಡಿಸೆಂಬರ 1 ರಂದು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧ ಹಾಗೂ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10ಕ್ಕೆ ಜಿಲ್ಲಾಡಳಿತ ಭವನದಿಂದ ಜಾಗೃತಿ ಜಾಥಾ ಪ್ರಾರಂಭವಾಗಿ ನವನಗರದ ನಾನಾ ಕಡೆ ಸಂಚರಿಸಿ ಜಿಲ್ಲಾ ಆಸ್ಪತ್ರೆಗೆ ಮುಕ್ತಾಯಗೊಳ್ಳಲಿದೆ. ನಂತರ 11 ಗಂಟೆಗೆ ವಿದ್ಯಾಗಿರಿಯ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ.