ಮಕ್ಕಳ ಸಾಹಿತ್ಯ ಎಂಬ ಹಣೆಪಟ್ಟಿ ಬೇಡ:ಫ.ಗು.ಸಿದ್ದಾಪೂರ
ನಿಮ್ಮ ಸುದ್ದಿ ಬಾಗಲಕೋಟೆ
ಕನ್ನಡ ಸಾಹಿತ್ಯ ಪರಿಷತ್ತು ಬೀಳಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೀಳಗಿ, ಮಕ್ಕಳ ಸಾಹಿತ್ಯ ಸಮಾಗಮ ಹಾಗೂ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಬೀಳಗಿ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಾಹಿತಿ ಸೋಮಲಿಂಗ ಬೇಡರರವರ ೮ನೇ ಕೃತಿ ‘ಪುಟ್ಟ ಹೆಜ್ಜೆ ಕುಣಿಸಿ ಗೆಜ್ಜೆ’ ಕೃತಿ ಬಿಡುಗಡೆಯಾಯಿತು.
ಉದ್ಘಾಟನೆ ನೆರವೇರಿಸಿ ವಿವೇಕಾನಂದ ಸಂಸ್ಥೆಯ ಸಂಸ್ಥಾಪಕರಾದ ಎಂ.ಎನ್.ಪಾಟೀಲ ಮಾತನಾಡಿ, ಇಂದಿನ ಸಾಹಿತ್ಯ ಮುಂದಿನ ಇತಿಹಾಸವಾಗುತ್ತದೆ. ಇಂದು ನಾವು ಓದುವ ಇತಿಹಾಸ ಹಿಂದಿನ ತಲೆಮಾರಿನ ಸಾಹಿತ್ಯಕ ಆಧಾರಗಳಾಗಿವೆ. ಅವಿಭಜಿತ ವಿಜಯಪುರ ಬಾಗಲಕೋಟೆ ಜಿಲ್ಲೆ ವಿಶೇಷವಾಗಿ ಮಕ್ಕಳ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದೆ ಎಂದರು.
ಕೃತಿ ಬಿಡುಗಡೆಗೊಳಿಸಿ ಬೀಳಗಿ ಬಿಆರ್‌ಸಿಒ ಆರ್.ಸಿ.ವಡವಾಣಿ ಮಾತನಾಡಿ, ಮಕ್ಕಳ ಮನಸ್ಸಿನ ಕವಿ ಮಾತ್ರ ಮಕ್ಕಳ ಸಾಹಿತ್ಯ ರಚಿಸಲು ಸಾಧ್ಯ. ಆ ನಿಟ್ಟಿನಲ್ಲಿ ಸೋಮಲಿಂಗ ಬೇಡರರವರ ಕೊಡುಗೆ ಅನನ್ಯ. ಕೊರೋನಾ ಕಾಲದ ಬಿಡುವಿನ ಅವಧಿಯನ್ನು ಸದಭಿರುಚಿಯ ಹವ್ಯಾಸವಾದ ಬರವಣಿಗೆಗೆ ಮೀಸಲಿಟ್ಟು ಮಕ್ಕಳ ಸಾಹಿತ್ಯ ರಚಿಸಿದ್ದು ಅವರ ಹೆಗ್ಗಳಿಕೆ ಎಂದರು.
ಕೃತಿ ಪರಿಚಯಿಸಿದ ಮಕ್ಕಳ ಸಾಹಿತಿ ಫ.ಗು.ಸಿದ್ದಾಪೂರ ಮಾತನಾಡಿ, ಸಾಹಿತ್ಯ ಕೃತಿಗಳು ಯಾವತ್ತಿಗೂ ಸಾವಿಲ್ಲದ ಕೇಡಿಲ್ಲದ ಕೂಸುಗಳು. ಯಾರಿಗೂ ಕೇಡು ಬಯಸದೆ ಎಂದೆAದಿಗೂ ಸಹೃದಯಿಗಳ ನಾಲಿಗೆಯ ಮೇಲೆ ಜೀವಂತವಾಗಿರುತ್ತವೆ. ಸಾಹಿತ್ಯವನ್ನು ಮಕ್ಕಳ ಸಾಹಿತ್ಯವೆಂದು ಹಣೆಪಟ್ಟಿ ಕಟ್ಟುತ್ತ ಸೀಮಿತಗೊಳಿಸುವುದಕ್ಕಿಂತ ಅಬಾಲವೃದ್ಧರೂ ಓದಿ ಅದನ್ನು ಪರಿಪೂರ್ಣ ಸಾಹಿತ್ಯವಾಗಿಸಬೇಕು ಎಂದು ಕರೆ ನೀಡಿದರು.
ಸಾಹಿತ್ಯದ ಮೂಲ ಹೆತ್ತಮ್ಮ. ಮಗುವಿಗೆ ಒಳ್ಳೆಯ ಸಂಸ್ಕಾರ, ಮೌಲ್ಯಗಳು, ಸನ್ನಡತೆಗಳನ್ನು ಆಚಾರಕ್ಕರಸಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು, ಜ್ಯೋತಿಯೇ ಆಗು ಜಗಕ್ಕೆಲ್ಲ ಎನ್ನುತ್ತ ಜನಪದದ ಅಮ್ಮ ಮೊದಲ ಸಾಹಿತಿಯಾಗಿದ್ದಾಳೆ. ಒತ್ತಡ, ಅವಸರದ ಬುದುಕು, ಆಸ್ತಿ ಸಂಪಾದನೆ, ಪ್ರತಿಷ್ಠೆ ಎನ್ನುತ್ತ ಮನುಷ್ಯ ಜೀವನದ ನಿಜ ಸಂತೋಷದಿಂದ ದೂರವಾಗಿದ್ದಾನೆ. ಆದ್ದರಿಂದ ಮನುಷ್ಯ ಮಕ್ಕಳಂತೆ ಬದಲಾಗಿ ಸಹಜ ಖುಷಿ, ಸಂತೋಷಗಳಿAದ ನಗುನಗುತ್ತ ಬದುಕಬೇಕಾಗಿದೆ ಎಂದರು.
ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಎಸ್.ಎಂ.ಪಾಡ ಪ್ರಾರ್ಥಿಸಿದರು. ಕಸಾಪ ಬೀಳಗಿ ಅಧ್ಯಕ್ಷ ಡಿ.ಎಂ.ಸಾಹುಕಾರ್ ಸ್ವಾಗತಿಸಿದರು. ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಜಿ.ಮಿರ್ಜಿ ಅಧ್ಯಕ್ಷತೆ ವಹಿಸಿದ್ದರು.
ಗ್ರಂಥ ದಾಸೋಹಿ ಮಡಿವಾಳಪ್ಪ ವಾಲಿಕಾರ, ಕೃತಿಕಾರ ಸೋಮಲಿಂಗ ಬೇಡರ, ಪ್ರಾಚಾರ್ಯ ಜಿ.ಆರ್.ಪಾಟೀಲ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುರಾಜ ಲೂತಿ. ಕಿರಣ ಬಾಳಾಗೋಳ, ಎಂ.ಎ.ಹಳ್ಳಿ, ಜ್ಯೋತಿಭಾ ಅವತಾಡೆ, ಅಶೋಕ ಬಳ್ಳಾ, ಬಿ.ಜಿ.ಗೌಡರ ಇತರರು ಇದ್ದರು.