This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ಕಾರ್ಮಿಕ ಕುಟುಂಬಕ್ಕೆ ಪರಿಹಾರ

ಕಾರ್ಮಿಕ ಕುಟುಂಬಕ್ಕೆ ಪರಿಹಾರ

ವಿಜಯಪುರ,

ನಗರದ ಹೊರವಲಯದ ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ರಾಜಗುರು ಇಂಡಸ್ಟ್ರೀಸ್ ನ ಮೆಕ್ಕೆಜೋಳ ಸಂಸ್ಕರಣೆ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ ಸಾವಿಗೀಡಾದ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿದ್ದ ಸಚಿವರು ಸೋಮವಾರ ಸಂಜೆ ನಡೆದ ಈ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ತಡರಾತ್ರಿ ವಿಜಯಪುರ ನಗರಕ್ಕೆ ದೌಡಾಯಿಸಿದರು. ಅಲ್ಲದೇ, ಘಟನಾ ಸ್ಥಳಕ್ಕೆ ತೆರಳಿ ಮಧ್ಯರಾತ್ರಿ ಬಹಳ ಹೊತ್ತಿನವರೆಗೂ ರಕ್ಷಣಾ ಕಾರ್ಯಾಚರಣೆ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಜಿ. ಪಂ. ಸಿಇಓ ರಾಹುಲ ಶಿಂಧೆ ಅವರಿಂದ ಘಟನೆ ಮತ್ತು ನಂತರ ಕೈಗೊಳ್ಳಲಾದ ರಕ್ಷಣಾ ಕಾರ್ಯಾಚರಣೆಯ ಕುರಿತು ಸಂಪೂರ್ಣ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸೇರಿದ್ದ ಉಳಿದ ಕಾರ್ಮಿಕರೊಂದಿಗೆ ಮಾತನಾಡಿದ ಸಚಿವರು, ಈ ಅವಘಡದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಮೆಕ್ಕೆಜೋಳದ ರಾಶಿಯಡಿ ಸಿಲುಕಿರುವ ಎಲ್ಲ ಕಾರ್ಮಿಕರ ಶವಗಳನ್ನು ಹೊರತೆಗೆದು ಶವ ಪರೀಕ್ಷೆಯ ಬಳಿಕ ಅವರ ಮೂಲ ರಾಜ್ಯವಾದ ಬಿಹಾರಕ್ಕೆ ಗೌರವಪೂರಕವಾಗಿ ಕಳುಹಿಸಿ ಕೊಡಲಾಗುವುದು. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಾಂತ್ವನ ಹೇಳಿದರು. ಅಲ್ಲದೇ, ಅವರಿಗೆ ನೈತಿಕವಾಗಿ ಧೈರ್ಯ ತುಂಬಿದರು.

ಈ ದುರ್ಘಟನೆಯಲ್ಲಿ ಸಾವಿಗೀಡಾದ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು. ಇದರ ಜೊತೆಗೆ ರಾಜಗುರು ಇಂಡಸ್ಟ್ರಿಸ್ ಮಾಲಿಕರಿಂದಲೂ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಸರಕಾರದಿಂದ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಕಾರ್ಮಿಕರಿಗೆ ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಘಟನೆ ಮನಸಿಗೆ ನೋವುಂಟು ಮಾಡಿದೆ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ, ಬೆಳಗಾವಿ ಅಧಿವೇಶನದಿಂದ ಇಲ್ಲಿಗೆ ನೇರವಾಗಿ ಬಂದಿದ್ದೇನೆ. ಘಟನೆ ನಡೆದ ತಕ್ಷಣದಿಂದ ಡಿಸಿ, ಎಸ್ಪಿ ಜೊತೆ ಸತತ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಕುರಿತು ಸತತವಾಗಿ ಮಾಹಿತಿ ಪಡೆದಿದ್ದೇನೆ. ಈಗ ಮೆಕ್ಕೆಜೋಳದ ರಾಶಿಯಡಿ ಸಿಲುಕಿರುವ ಕಾರ್ಮಿಕರನ್ನು ಹೊರ ತೆಗೆಯಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಘಟನೆಯಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ಹೊರತೆಗೆದು ಶವಪರೀಕ್ಷೆಯ ಬಳಿಕ ಅವರ ಊರುಗಳಿಗೆ ಕಳುಹಿಸಲಾಗುವುದು. ಬಿಹಾರದ ಆಯಾ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಆಯಾ ಕಾರ್ಮಿಕರ ಊರುಗಳಿಗೆ ಪಾರ್ಥಿವ ಶರೀರ ಕಳುಹಿಸಲು ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಈ ಘಟನೆಗೆ ನಿಖರ ಕಾರಣ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಕುರಿತು ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಈ ಘಟನೆಯಲ್ಲಿ ಯಾರದೇ ತಪ್ಪಿದ್ದರೂ ಆ ಕುರಿತೂ ವಿಚಾರಣೆ ನಡೆಸಲಾಗುವುದು. ಒಟ್ಟಾರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಸಾವಿಗೀಡಾದ ಕಾರ್ಮಿಕರ ಕುಟುಂಬಗಳಿಗೆ ಮಾನವೀಯತೆ ದೃಷ್ಠಿಯಿಂದ ರಾಜ್ಯ ಸರಕಾರದಿಂದ ಪರಿಹಾರ ನೀಡಲು ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲ, ರಾಜಗುರು ಇಂಡಸ್ಟ್ರಿಸ್ ಮಾಲಿಕರಿಂದಲೂ ಪರಿಹಾರ ನೀಡುವಂತೆ ಸೂಚಿಸಲಾಗುವುದು. ಗಾಯಾಳುಗಳಿಗೂ ಪರಿಹಾರ ನೀಡಲಾಗುವುದು ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಡಿವೈಎಸ್ಪಿ ಬಸವರಾಜ ಯಲಿಗಾರ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು

*1 ಮತ್ತು 2 ಮೆಕ್ಕೆಜೋಳ ಸಂಸ್ಕರಣೆ ಘಟಕಕ್ಕೆ ಎಂ. ಬಿ. ಪಾಟೀಲ ಭೇಟಿ:* ವಿಜಯಪುರ ನಗರದ ಹೊರವಲಯದ ಕೈಗಾರಿಕೆ ಪ್ರದೇಶದಲ್ಲಿ ಮೆಕ್ಕೆಜೋಳ ಸಂಸ್ಕರಣೆ ಘಟಕ ಕುಸಿದು ಕಾರ್ಮಿಕರು ಸಾವಿಗೀಡಾದ ಸ್ಥಳಕ್ಕೆ ಸಚಿವ ಎಂ. ಬಿ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ, ಎಸ್ಪಿ ಋಷಿಕೇಶ ಸೋನಾವಣೆ, ಜಿ. ಪಂ. ಸಿಇಓ ರಾಹುಲ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.

*3 ಮತ್ತು 4 ಮೆಕ್ಕೆಜೋಳ ಸಂಸ್ಕರಣೆ ಘಟಕಕ್ಕೆ ಎಂ. ಬಿ. ಪಾಟೀಲ ಭೇಟಿ:* ವಿಜಯಪುರ ನಗರದ ಹೊರವಲಯದ ಕೈಗಾರಿಕೆ ಪ್ರದೇಶದಲ್ಲಿ ಮೆಕ್ಕೆಜೋಳ ಸಂಸ್ಕರಣೆ ಘಟಕ ಕುಸಿದು ಕಾರ್ಮಿಕರು ಸಾವಿಗೀಡಾದ ಸ್ಥಳಕ್ಕೆ ಸಚಿವ ಎಂ. ಬಿ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆತಂಕದಲ್ಲಿದ್ದ ಉಳಿದ ಕಾರ್ಮಿಕರಿಗೆ ಸಚಿವರು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ, ಎಸ್ಪಿ ಋಷಿಕೇಶ ಸೋನಾವಣೆ, ಜಿ. ಪಂ. ಸಿಇಓ ರಾಹುಲ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.

Nimma Suddi
";