ನಿಮ್ಮ ಸುದ್ದಿ ಬಾಗಲಕೋಟೆ
ಭಾಗ್ಯ ಜ್ಯೋತಿ ಹಾಗೂ ಕುಟೀರ ಯೋಜನೆಯಲ್ಲಿನ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಜನರು ಹೆಸ್ಕಾಂಗೆ ಮನವಿ ಮಾಡಿದ್ದಾರೆ.
ಗ್ರಾಮದ ಬನಶಂಕರಿ ದೇವಸ್ಥಾನದ ಹತ್ತಿರದ ಎಸ್‌ಸಿ ಕಾಲೋನಿ ನಿವಾಸಿಗಳು ಹೆಸ್ಕಾಂ ಕಚೇರಿಗೆ ಆಗಮಿಸಿ ಅಲ್ಲಿನ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಬಾಕಿ ಹಣ ಪಾವತಿಗಾಗಿ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಕೂಡಲೆ ಸಂಪರ್ಕ ನೀಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಎಸ್‌ಸಿ ಕಾಲೋನಿಯಲ್ಲಿನ ಜನತೆಗೆ ಭಾಗ್ಯಜ್ಯೋತಿ ಹಾಗೂ ಕುಟೀರ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಅದೀಗ ಉಚಿತದ ಬದಲಾಗಿ ಸಾವಿರಾರು ರೂ. ಬಿಲ್ ಬಂದಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ನಮಗೆಲ್ಲ ತೊಂದರೆಯಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ಹಿಂದಿನ ಬಾಕಿಯನ್ನು ಮನ್ನಾ ಮಾಡಬೇಕು. ಮುಂದಿನ ವಿದ್ಯುತ್ ಬಿಲ್‌ನ್ನು ನಾವೇ ಭರಿಸುತ್ತೇವೆ. ಹೀಗಾಗಿ ನಿಲ್ಲಿಸಿದ ವಿದ್ಯುತ್ ಸರಬರಾಜನ್ನು ಕೂಡಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯ ಮಹಿಬೂಬ್‌ಸಾಬ್ ಗುಡದಾರಿ, ಪರಶು ಭೋವಿ, ಬಸು ರಕ್ಕಸಗಿ, ಹುಲ್ಲಪ್ಪ ವಡ್ಡರ, ಕಸ್ತೂರೆವ್ವ ಭಜಂತ್ರಿ, ಗಂಗವ್ವ ಭಜಂತ್ರಿ ಇತರರು ಇದ್ದರು.