ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಸಮೀಪದ ಗಂಗೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಸಿದ್ದಮ್ಮ ಪಾಟೀಲ ಆಯ್ಕೆ ಆಗಿದ್ದಾರೆ.
ಗಂಗೂರ ಪಿಕೆಪಿಎಸ್‌ನ ಆಡಳಿತ ಮಂಡಳಿಯ 12 ಸ್ಥಾನಗಳಲ್ಲಿ 2 ಸ್ಥಾನ ಮಹಿಳಾ ಮೀಸಲಾತಿ ಹೊಂದಿತ್ತು. ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದರು. ಜು.14 ರಂದು ನಡೆದ ಮತದಾನದಲ್ಲಿ ಇಬ್ಬರು ಆಯ್ಕೆಯಾಗಿದ್ದು ಅದರಲ್ಲಿ ಸಿದ್ದಮ್ಮ ಪಾಟೀಲ 417 ಮತ ಪಡೆದು ಜಯಶಾಲಿಯಾದ ಮೊದಲ ಅಭ್ಯರ್ಥಿ ಆಗಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸಿದ್ದಮ್ಮ ಪಾಟೀಲರು ತಮ್ಮ 18 ವರ್ಷ ಪೂರೈಸುತ್ತಲೇ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇವೆ ಆರಂಭಿಸಿ ನಂತರ ಕೆಇಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೌಢಶಾಲೆ ಮುಖ್ಯಶಿಕ್ಷಕರಾಗಿ, ಬಿಆರ್‌ಸಿ ಕೋಆರ್ಡಿನೇಟರ್, ಬಿಇಒ, ಬಿಸಿಯೂಟ ಅಧಿಕಾರಿ, ಜ್ಯೂನಿಯರ್ ಕಾಲೇಜ್ ಪ್ರಾಚಾರ್ಯ, ಉಪಪ್ರಾಚಾರ್ಯ, ಬಿಆರ್‌ಸಿ ಬಾದಾಮಿ, ಹುನಗುಂದ, ಯಲಬುರ್ಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಇಳಕಲ್ ಡೈಟ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತಿಯಾಗಿದ್ದರು.
ಗಂಗೂರ ಗ್ರಾಮದವರಾದ ಸಿದ್ದಮ್ಮ ಪಾಟೀಲರು ಅಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಆಡಳಿತ ಮಂಡಳಿಯ ಚುನಾವಣೆಗೆ ಮಹಿಳಾ ಕೋಟಾದಲ್ಲಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.
“ಜನಸೇವೆಯೇ ಜನಾರ್ಧನ ಸೇವೆ ಎಂದು ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಕಾರ್ಯ ನಿರ್ವಹಣೆ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಪಟ್ಟಿದ್ದು ಇದೀಗ ಮತ್ತೊಂದು ಹಂತದಲ್ಲಿ ಜನಸೇವೆಗೆ ಮುಂದಾಗಿದ್ದೇನೆ.”
-ಸಿದ್ದಮ್ಮ ಪಾಟೀಲ, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ.