ವಿಜಯಪುರ
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ 9 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 4025.86 ಕೋಟಿ ರೂ. ವೆಚ್ಚದಲ್ಲಿ 1514.71 ಕಿಮೀ ರಸ್ತೆ ನಿರ್ಮಿಸಿ ರಸ್ತೆ ಕ್ರಾಂತಿ ಮಾಡಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ, ರಾಜ್ಯ ಹೆದ್ದಾರಿ ಕಾಮಗಾರಿ, ಅನುದಾನ ಬಳಕೆ, ಮಾರ್ಗಗಳ ಮೇಲ್ದರ್ಜೆ ಹೀಗೆ 9 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯದ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
ವಿಜಯಪುರ-ಸೊಲ್ಲಾಪೂರ 110 ಕಿಮೀ ಚತುಷ್ಟಥ ನಿರ್ಮಿಸಿದ್ದರಿಂದ ಸೊಲ್ಲಾಪೂರ ಹಾಗೂ ಮುಂಬೈಗೆ ಸುಗಮ ಸಂಚಾರ ಸಾಧ್ಯವಾಗಿದೆ. ಈ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗ ಕಾಮಗಾರಿಗಳಿಗಾಗಿ 460 ಕೋಟಿ ರೂ. ಖರ್ಚು ಮಾಡಿ 810 ಕಿಮೀ ರಸ್ತೆ ನಿರ್ಮಿಸಲಾಗಿದೆ, ವಿಜಯಪುರ ಸೇವಾಲಾಲ ನಗರ (ಮಹಲ್)ದಿಂದ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದವರೆಗೆ 80 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, 190 ಕೋಟಿ ರೂ. ಖರ್ಚಾಗಲಿದೆ ಎಂದರು.
ವಿಜಯಪುರ-ಹುಬ್ಬಳ್ಳಿ ರಸ್ತೆಯನ್ನು ಕೊಲ್ಹಾರದವರೆಗೆ ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, 291ಕೋಟಿ ರೂ. ಖರ್ಚು ಮಾಡಲಾಗುವುದು ಎಂದರು.
ವಿಜಯಪುರ ಪ್ರವಾಸಿ ಮಂದಿರ ವೃತ್ತದಿಂದ ತೆಲಸಂಗ ಕ್ರಾಸ್‌ವರೆಗೆ 39 ಕಿಮೀ ರಸ್ತೆ ನಿರ್ಮಾಣಕ್ಕೆ 250 ಕೋಟಿ ರೂ, ಸಿದ್ಧಾಪೂರ-ಅರಕೇರಿ ವಿಜಯಪುರವರೆಗೆ 90.31 ಕೋಟಿ ರೂ.ವೆಚ್ಚದಲ್ಲಿ 11ಕಿಮೀ ರಸ್ತೆಘಿನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮಣ್ಣೂರ, ಹಿರೇಬೇವನೂರ, ಇಂಡಿ, ರೂಗಿ, ನಾಗಠಾಣ ಅಲಿಯಬಾದ್ ರೈಲ್ವೆ ಮೇಲ್ಸೇತುವೆ, ವಿಜಯಪುರ ಪಟ್ಟಣದ ವರ್ತುಲ ರಸ್ತೆಯಿಂದ ಪ್ರವಾಸಿ ಮಂದಿರವರೆಗೆ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಸಂಸದರು ತಿಳಿಸಿದರು.
ಪಿಎಂ ಗ್ರಾಮ ಸಡಕ್ ಕಾಮಗಾರಿ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದಲೂ ಹಲವು ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು 82 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 151.17 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೋಳಲಾಗುತ್ತಿದೆ. ವರ್ಷದ ಅವಧಿಯಲ್ಲಿ 91.13 ಕಿಮೀ ರಸ್ತೆ ನಿರ್ಮಿಸಲಾಗಿದೆ ಎಂದರು.
ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ವ್ಯಾಪ್ತಿಲ್ಲಿ ಕಳೇದ 14 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು , 12ಕಾಮಗಾರಿಗಳು ಪೂರ್ಣಗೊಂಡಿವೆ. ಒಟ್ಟು ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 213.70 ಕೋಟಿ ರೂ. ಅನುದಾನಕ್ಕೆ ತಾತ್ವಿಕ ಒಪ್ಪಿಗೆ ದೊರಕಿದೆ ಎಂದರು.
ವಿಜಯಪುರ-ಸೊಲ್ಲಾಪೂರ ಸಿಕ್ಸ್ ಲೇನ್
ವಿಜಯಪುರ-ಸೊಲ್ಲಾಪೂರ ಚತುಷ್ಪಥವನ್ನು ಷಷ್ಠ ಮಾರ್ಗ (ಸಿಕ್ಸ್‌ಲೇನ್)ವನ್ನಾಗಿ ಪರಿವರ್ತಿಸಲು ಮಂಜೂರಾತಿ ಸಹ ದೊರಕಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ವಿವರಿಸಿದರು.
ಬಿಜೆಪಿ ಮುಖಂಡರಾದ ಪಾಪುಸಿಂಗ್ ರಜಪೂತ, ಸಂಗಮೇಶ ಉಕ್ಕಲಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಏರ್‌ಪೋರ್ಟ್ ಕ್ರೆಡಿಟ್ ನನಗೆ
ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕ್ರೆಡಿಟ್ ನನಗೆ ಸಲ್ಲಬೇಕು. ಸದರಿ ವಿಮಾನ ನಿಲ್ದಾಣಕ್ಕೆ ಹಲವಾರು ಬಾರಿ ಪತ್ರ ಬರೆದಿದ್ದಲ್ಲದೆ ಅನುದಾನ ತಂದವನು ನಾನು. ಹೀಗಾಗಿ ಅದರ ಕ್ರೆಡಿಟ್ ನನಗೆ ಸಲ್ಲಬೇಕು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.