*21ನೇ ಜಾನುವಾರು ಗಣತಿ ಕುರಿತು ತರಬೇತಿ
ಬಾಗಲಕೋಟೆ:
ರೈತರ ಬಳಿ ಇರುವ ಜಾನುವಾರುಗಳ ದತ್ತಾಂಶ ಸಂಗ್ರಹಣೆಯಲ್ಲಿ ಏಣಿಕೆದಾರರ ಪಾತ್ರ ಮುಖ್ಯವಾಗಿದೆ ಎಂದು ಧಾರವಾಡ ಪಶುಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಎಲ್.ಪರಮೇಶ್ವರ ನಾಯಕ ಹೇಳಿದರು.
ನಗರದ ಪಶು ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಜಾನುವಾರು ಗಣತಿ ಕುರಿತು ಗಣತಿದಾರರ ಮತ್ತು ಮೆಲ್ವಿಚಾರಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗಣತಿ ಕಾರ್ಯ ಸೆಪ್ಟೆಂಬರ 1 ರಿಂದ ಪ್ರಾರಂಭವಾಗಿ ಡಿಸೆಂಬರ 31 ವರೆಗೆ ರಾಷ್ಟ್ರಾದ್ಯಂತ ಏಕಕಾಲದಲ್ಲಿ ಜರುಗಲಿದೆ.
ಪ್ರತಿ 5 ವರ್ಷಕ್ಕೊಮ್ಮೆ ಗಣತಿ ಕಾರ್ಯ ನಡೆಸಲಾಗುತ್ತಿದ್ದು, ಗಣತಿದಾರರು ಪ್ರತಿಯೊಬ್ಬ ರೈತರ ಮನೆಗೆ ಹೋಗಿ ಜಾನುವಾರುಗಳ ಮಾಹಿತಿ ಸಂಗ್ರಹಿಸಿ ಎಮ್ಮೆಗಳಲ್ಲಿ ನೋಂದಾಯಿತ ತಳಿ ಧಾರವಾಡಿ ಮಾತ್ರ ಇದ್ದು, ಇತರೆ ತಳಿಗಳಾದ ಸುರ್ತಿ, ಮುರ್ರಾ, ಜಾಫರ್ ಬಾದಿ, ಮೆಹಸನ ಮತ್ತು ಪಂಡರಾಪುರಿ ಸಹ ದಾಖಲಿಸಲು ತಿಳಿಸಿದರು.
ಜಿಲ್ಲೆಯ ಗಡಿ ಭಾಗದಲ್ಲಿ ಕೃಷ್ಣವ್ಯಾಲಿ, ಖಿಲಾರಿ, ಹಳ್ಳಿಕಾರ್ ಮತ್ತು ಗೀರ್ ತಳಿಗಳು ಲಭ್ಯವಿದ್ದು, ತಪ್ಪದೇ ದಾಖಲಿಸಲು ಸೂಚಿಸಿದರು. ಸ್ಥಳೀಯ ತಳಿಗಳನ್ನು ಗಣತಿಯಲ್ಲಿ ದಾಖಲಿಸದೇ ಇದ್ದಲ್ಲಿ ಸ್ಥಳೀಯ ತಳಿಗಳು ಅಳಿವಿನಂಚಿಗೆ ಎಂದು ನೋಟಿಪೈ ಆಗುವ ಸಾಧ್ಯತೆ ಇರುವದರಿಂದ ತಳಿಗಳ ಗುಣಲಕ್ಷಣಗಳನ್ನು ಪರಿಶೀಲಿಸಿ, ನಿಖರವಾಗಿ ಗುರುತಿಸಿ ಕುರಿ ಮತ್ತು ಮೇಕೆ ಹಾಗೂ ಕುಕ್ಕುಟಗಳ ಮತ್ತು ನಾಯಿಗಳ ಮಾಹಿತಿಯನ್ನು ಸರಿಯಾಗಿ ಸಂಗ್ರಹಿಸಿ ತಂತ್ರಾಂಶದಲ್ಲಿ ಇಂದ್ರೀಕರಿಸಲು ತಿಳಿಸಿದರು.
ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಎಚ್.ಕರಡಿಗುಡ್ಡ ಮಾತನಾಡಿ ಗಣತಿ ಕಾರ್ಯವು ಮೊಬೈಲ್ ಅಪ್ಲಿಕೇಷನ್ ಮೂಲಕ ಜರುಗುತ್ತಿದ್ದು, ಜಿಲ್ಲೆಯಲ್ಲಿ ಅಂದಾಜು 3,70,982 ಕುಟುಂಬಗಳ ಸಂಖ್ಯೆ ಇದೆ 91 ಗಣತಿದಾರರು, 21 ಮೇಲ್ವಿಚಾರಕರು ಒಟ್ಟು 613 ಹಳ್ಳಿ ಹಾಗೂ 394 ವಾರ್ಡಗಳಲ್ಲಿ ಗಣತಿ ಕಾರ್ಯ ನಿರ್ವಹಿಸಬೇಕಿದೆ. ನಿಖರವಾದ ಅಂಕಿ-ಅಂಶಗಳ ಸಂಗ್ರಹಣೆ ಮಾಡುವಂಎ ಗಣತಿದಾರರಿಗೆ ಸಲಹೆ ನೀಡಿದರು.
21ನೇ ಜಾನುವಾರು ಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.
ಮಾಸ್ಟರ ತರಬೇತುದಾರರಾದ ಡಾ.ಶ್ರವಣಕುಮಾರ ಗದ್ದಿ ಗಣತಿ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಾನುವಾರು ರೋಗಗಳ ಕಣ್ಗಾವಲು ಯೋಜನೆಯ ಉಪನಿರ್ದೇಶಕರಾದ ಡಾ.ರಮೇಶ ದೊಡಮನಿ, ಡಾ.ಆನಂದ ರೆಡ್ಡಿ, ಪಶು ಔಷಧ ಭಂಡಾರ ಉಪನಿರ್ದೇಶಕ ಹೆಬ್ಬಾಳ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಜಿ.ಬಿ.ಗುರವ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಆರ್.ಎಸ್.ಪದರಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮುರುಗೇಶ ಹೂಗಾರ ಸ್ವಾಗತಿಸಿದರು. ಡಾ.ಎಸ್.ಪಿ.ಬೇನಾಳ ವಂದಿಸಿದರು. ಎಸ್.ಎಚ್.ಘಂಟಿ ಕಾರ್ಯಕ್ರಮ ನಿರೂಪಿಸಿದರು.