ನೂತನ ಹೆಚ್ಚುವರಿ ನ್ಯಾಯಾಲಯ ಕಟ್ಟಡದ ಶಂಕುಸ್ಥಾಪನೆ
ಬಾಗಲಕೋಟೆ
ಉತ್ತಮವಾದ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಾಂಗದ ಕೊಡುಗೆ ಬಹಳ ಮುಖ್ಯವಾಗಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಎಚ್.ಪಿ.ಸಂದೇಶ ಹೇಳಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ನೂತನವಾಗಿ ನಿರ್ಮಿಸುತ್ತಿರುವ ಹೆಚ್ಚುವರಿ ನ್ಯಾಯಾಲಯಗಳ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಪ್ರತಿಯೊಬ್ಬರಿಗೂ ಸಮಬಾಳು, ಸಮಪಾಲು ಸಿಗಬೇಕಾದರೆ ನ್ಯಾಯಾಂಗ ಕ್ರೀಯಾಶೀಲವಾಗಿ ಕೆಲಸ ಮಾಡಿದಾಗ ಮತ್ರ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯು ಕಾನೂನುಗಳನ್ನು ಗೌರವಿಸುವ ಕಾರ್ಯ ಮಾಡಿದಾಗ ಮಾತ್ರ ಸದೃಡ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರು.
ಆಡಳಿತ ವ್ಯವಸ್ಥೆಯಲ್ಲಿ ಕೇವಲ ನ್ಯಾಯಾಂಗ ಉತ್ತಮವಾಗಿ ಕೆಲಸ ಮಾಡಿದರೆ ಸಾಲದು ಕಾರ್ಯಾಂಗ ಮತ್ತು ಶಾಸಕಾಂಗ ಸಹ ಮಾಡಬೇಕು. ಪ್ರತಿಯೊಂದು ಕಾರ್ಯದಲ್ಲಿ ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಕಾರ್ಯಮಾಡಿದಾಗ ಸಮಾಜಮುಖ ಕಾರ್ಯ ಮಾಡಿದಂಗಾಗುತ್ತದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಕೊಂಡಿಲ್ಲ ಎಂದಾಗುತ್ತದೆ. ಎಲ್ಲರಿಗೂ ಸಮಾನವಾದ ಅವಕಾಶ, ದುಡಿಮೆಗೆ ಅವಕಾಶ ಕಟ್ಟಿಕೊಟ್ಟಾಗ ಮಾತ್ರ ಸುಂದರ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಹೆಚ್ಚುವರಿಯಾಗಿ ನ್ಯಾಯಾಲಯದ ಕಟ್ಟಡವನ್ನು 17.60 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡದ ಕಾಮಗಾರಿ ಗುಣಮಟ್ಟದಿಂದ ನಿರ್ಮಾಣವಾಗಬೇಕಾದರೆ. ಕೇವಲ ನ್ಯಾಯಾಧೀಶರ, ವಕೀಲರ ಜವಾಬ್ದಾರಿ ಆಗಿಲ್ಲ. ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಹಂತದಲ್ಲಿ ಕಾಮಗಾರಿ ಗುಣಮಟ್ಟದಲ್ಲಿರುವ ಬಗ್ಗೆ ಪರಿಶೀಲನೆ ಅಗತ್ಯವಾಗಿದೆ. ಉತ್ತಮ ಕಟ್ಟಡ ನಿರ್ಮಾಣವಾಗಿ ಜನರಿಗೆ ಉತ್ತಮ ನ್ಯಾಯ ದೊರಕಿಸಿಕೊಡುವ ಕಾರ್ಯವಾಗಬೇಕೆಂದು ತಿಳಿಸಿದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರವಿ ಹೊಸಮನಿ ಮಾತನಾಡಿ ನ್ಯಾಯಾಲಯದಲ್ಲಿ ಬೇಗನೇ ಪ್ರಕರಣ ಇತ್ಯರ್ಥವಾಗುವದಿಲ್ಲವೆಂಬ ಜನ ಸಾಮಾನ್ಯರು ಹೇಳುತ್ತಿರುವುದನ್ನು ಕೇಳುತ್ತಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯಗಳು ಇಲ್ಲ. ಆದರೂ ಸಹ ಸಾಮಥ್ರ್ಯ ಮೀರಿ ನ್ಯಾಯಾಧೀಶರು ಕೆಲಸ ಮಾಡಲಾಗುತ್ತಿದ್ದಾರೆ ಎಂದರು.
ಹಿರಿಯ ನ್ಯಾಯಾಧೀಶರು ಕಿರಿಯ ನ್ಯಾಯಾಧೀಶರನ್ನು ಪೋಷಿಸುವ ಮೂಲಕ ಉತ್ತಮ ನ್ಯಾಯ ಒದಗಿಸುವ ಕೆಲಸವಾಗಲಿ ಎಂದರು.
ಇನ್ನೋರ್ವ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಮಾತನಾಡಿ ನಮ್ಮ ದೇಶದಲ್ಲಿ ಲಕ್ಷ ಜನರಿಗೆ 13 ನ್ಯಾಯಾಲಯಗಳಿದ್ದರೆ, ಸದ್ಯ 17 ನ್ಯಾಯಾಲಯಗಳಿವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಲಕ್ಷ ಜನರಿಗೆ 50 ನ್ಯಾಯಾಲಯಗಳು ಇರಬೇಕು.
ಆದರೆ ಆ ಮಟ್ಟಕ್ಕೆ ಹೋಗಬೇಕಾದರೆ ನ್ಯಾಯಾಲಯಗಳಿಗೆ ಒದಗಿಸುವ ಮೂಲಭೂತ ಸೌಲಭ್ಯ ಹೆಚ್ಚಾದಾಗ ಮಾತ್ರ ತರ್ತು ಪ್ರಕರಣ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ. ಕೇವಲ ಅಭಿವೃದ್ದಿ ಬೆಂಗಳೂರಿನಲ್ಲಿ ಆಗದೆ ಉತ್ತರ ಕರ್ನಾಟಕ ಭಾಗದಲ್ಲಿ ಆಗಬೇಕಿದೆ. ವಕೀಲರ ಅಕಾಡೆಮಿ ಉತ್ತರ ಕರ್ನಾಟಕದ ಭಾಗದಲ್ಲಿ ಮಾಡಿದಾಗ ವಕೀಲರಿಗೆ ಅನುಕೂಲವಾಗಲಿದೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ ಮಾತನಾಡಿ ಈ ಭಾಗದದ ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದ ಪ್ರಕರಣಗಳು ಬಹಳಷ್ಟು ಇದ್ದು, ನೂತನ ನ್ಯಾಯಾಲಯದ ಕಟ್ಟಡ ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಬೇಗನೆ ಪ್ರಕರಣಗಳು ಇತ್ಯರ್ಥಗೊಳ್ಳುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಸಂಘದ ಸದಸ್ಯ ಎಸ್.ಎಸ್.ಮಿಟ್ಟಲಕೋಡ, ರಮೇಶ ಬದ್ನೂರ, ಕಾರ್ಯದರ್ಶಿ ಪ್ರಶಾಂತ ನಾರಾಯಣಕರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕೆ.ದುರ್ಗಾದಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅತಿಥಿಗಳನ್ನು ಸಾಂಸ್ಕøತಿಕ ಕಲಾತಂಡಗಳ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.