ಬಾಗಲಕೋಟೆ
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪಪೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಗುಲಾಬಿ ಆಂದೋಲನ ಆಯೋಜಿಸಲಾಗಿತ್ತು.
ಆಯಾ ಶಿಕ್ಷಣ ಸಂಸ್ಥೆಗಳ ಶಾಲೆ, ಕಾಲೇಜ್ ಮಕ್ಕಳ ಮೂಲಕ ಜಾಥಾ ಹಮ್ಮಿಕೊಂಡು ಶಿಕ್ಷಣ ಸಂಸ್ಥೆಯ ೧೦೦ ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಭೇಟಿ ನೀಡಿ ವಿರ್ದ್ಯಾರ್ಥಿಗಳು ಗುಲಾಬಿ ಹೂವು ನೀಡಿದರು.
ತಂಬಾಕು ಮಾರಾಟಗಾರರಿಗೆ ಅದರ ದುಷ್ಪರಿಣಾಮ, ತಂಬಾಕು ನಿಯಂತ್ರಣ ಕಾಯ್ದೆಯಂತೆ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ೧೦೦ ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇದ ಕುರಿತು ಹಾಗೂ ತಂಬಾಕು ಸೇವನೆ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ತಿಳಿ ಹೇಳಲಾಯಿತು.
ಗುಲಾಬಿ ಆಂದೋಲನವನ್ನು ಬೀಳಗಿ ತಾಲೂಕಿನ ಹೆಣ್ಣುಮಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಲಗಲಿಯಲ್ಲಿ ಜಿಲ್ಲಾ ಸಮೀಕ್ಷಣಾ ಘಟಕದ ಜಿಲ್ಲಾ ಸಮೀಕ್ಷಣಾಕಾರಿ ಡಾ.ದಯಾನಂದ ಕರೆನ್ನವರ ಉದ್ಘಾಟಿಸಿದರು.
ಬಾಗಲಕೋಟೆ ನಗರದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಕಾರಿ ಡಾ.ಶಿವನಗೌಡ ಪಾಟೀಲ, ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಠಳ್ಳಿ, ಹಿರಿಯ ಆರೋಗ್ಯ ನಿರೀಕ್ಷಣಾಕಾರಿ ಬಸವರಾಜ ಹೊಸಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಕಾರಿ ಶಶಿಕಲಾ ಶಿನ್ನೂರ, ಸುಭಾಸ ಪಾಟೀಲ, ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ, ಆರೋಗ್ಯ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.