ಗೌರಿಬಿದನೂರು : ಆಹಾರ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೇರಿದ್ದು, ಪ್ರತಿ ನಿತ್ಯದ ಆಹಾರ ತಯಾರಿಕೆಗೂ ಬೆಲೆ ಏರಿಕೆ ತೊಡಕಾಗಿ ಪರಿಣಮಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ರೈತರು ಜೀವನ ನಡೆಸಲು ಹೈನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಜತೆಗೆ ತರಕಾರಿ, ಸೊಪ್ಪುಗಳನ್ನು ಬೆಳೆಯುವ ಮೂಲಕ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಮುಂದಾಗಿದ್ದರು. ಆದರೆ ಹವಾಮಾನ ವೈಪರೀತ್ಯದಿಂದ ತರಕಾರಿ ಬೆಳೆಗಳು ಕುಂಠಿತವಾಗಿವೆ. ಇದರಿಂದ ರೈತರ ಆರ್ಥಿಕತೆಗೂ ಕುತ್ತು ಬಂದಿದೆ. ಜತೆಗೆ ತರಕಾರಿ, ಸೊಪ್ಪಿನ ಬೆಲೆ ಏರಿಕೆಯಿಂದ ಗ್ರಾಹಕರೂ ತತ್ತರಿಸುವಂತಾಗಿದೆ.
ತಾಲೂಕಿನಲ್ಲಿ ರೈತರು ತಮ್ಮ ದಿನನಿತ್ಯದ ಆರ್ಥಿಕತೆಯ ಹಿತದೃಷ್ಟಿಯಿಂದ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಬಿರು ಬೇಸಿಗೆಯಿಂದ ತರಕಾರಿ, ಸೊಪ್ಪು ಬೆಳೆ ಬಾರದೆ ತರಕಾರಿ ಬೆಲೆ ಗಗನ ಮುಟ್ಟಿದೆ. ಜತೆಗೆ ಕೊತ್ತಂಬರಿ ಸೊಪ್ಪಿನ ಇಳುವರಿಯೂ ಇಲ್ಲದೆ, ಬೆಲೆ ಕೈಗೆಟುಕದಾಗಿದೆ. ಒಂದು ಕಟ್ಟು ಸೊಪ್ಪಿಗೆ (ಸುಮಾರು ಒಂದು ಕೆ.ಜಿ.) 350ರಿಂದ 375 ರೂ. ದುಬಾರಿ ಬೆಲೆ ನೀಡಿ ಖರೀದಿಸುವಂತಾಗಿದೆ.
ಕೊತ್ತಂಬರಿ ಸೊಪ್ಪು ಹೆಚ್ಚು ಪೌಷ್ಟಿಕಾಂಶದ ಸಾರವನ್ನು ಹೊಂದಿದೆ. ಜತೆಗೆ ವಿಶಿಷ್ಟವಾದ ತಾಜಾತನ ಪರಿಮಳ ಹೊಂದಿದೆ. ಮಾಂಸದೂಟ ತಯಾರಿಕೆಯಲ್ಲಿ ಸಲಾಡ್‌ಗಳು, ಪಾನೀಯಗಳಿಗೆ ಬಳಸಲಾಗುತ್ತದೆ. ಜತೆಗೆ ಆಯುರ್ವೇದ, ವೈದ್ಯಕೀಯ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ವಿಟಮಿನ್ ಎ, ಕೆ ಮತ್ತು ಸಿ ಹಾಗೂ ಖನಿಜಗಳನ್ನು ಹೊಂದಿದೆ.
ಆಹಾರದ ರುಚಿ ಹೆಚ್ಚಿಸಲು ಮತ್ತು ಪರಿಮಳ ಸೇರಿಸಲು ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಆದರೆ ಅದನ್ನು ಖರೀದಿಸಲು ಬೆಲೆ ಕೇಳಿಯೇ ಗ್ರಾಹಕರು ಹುಬ್ಬೇರುವಂತಾಗಿದೆ.