ವಿಜಯಪುರ: ಸತತ ಹನ್ನೊಂದು ಚುನಾವಣೆಗಳಲ್ಲಿ ಜಯಗಳಿಸಿ ದಾಖಲೆಗೆ ಕಾರಣರಾದ ರಮೇಶ ಜಿಗಜಿಣಗಿ ಅವರ ಸರಳ ಸ್ವಭಾವ, ಜನೋಪಯೋಗಿ ಕೆಲಸ, ಪಕ್ಷದ ಕೆಲಸದ ಕಟಿಬದ್ದತೆ, ಅಪಾರ ಕಾರ್ಯಕರ್ತರ ಬೆಂಬಲ ಆಧರಿಸಿ ಈ ಬಾರಿ ವಿಜಯಪುರ ಜನತೆ ಜಿಗಜಿಣಗಿ ಅವರನ್ನು ಆಶಿರ್ವದಿಸುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆಗಾಗಿ ವಿಜಯಪುರಕ್ಕೆ ಆಗಮಿಸಿದ್ದ ಅವರು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಿ.ಟಿ. ರವಿ ಅವರು, ದೇಶದಲ್ಲೆಡೆ ಮೋದಿ ಅಲೆ ಬೀಸುತ್ತಿರುವ ಸಂದರ್ಭದಲ್ಲಿ ವಿಜಯಪುರಕ್ಕೆ ಜಿಗಜಿಣಗಿ, ದೇಶಕ್ಕೆ ಮೋದಿ ಎಂಬ ಘೋಷವಾಕ್ಯದೊಂದಿಗೆ ಜನರ ಬಳಿ ಮತಯಾಚನೆ ಮಾಡುತ್ತಿದ್ದೇವೆ ಎಂದರು.
2014 ರ ಮುಂಚೆ ಪತ್ರಿಕೆಗಳಲ್ಲಿ ಕೇವಲ ಹಗರಣಗಳದೇ ಸುದ್ದಿಗಳಿರುತ್ತಿದ್ದವು. ಈಗ ಹಗರಣಗಳ ಬದಲು ಯೋಜನೆಗಳ ಸದ್ದು ಮಾಡುತ್ತಿದ್ದು, ಸಕಾರಾತ್ಮಕವಾಗಿ ಬದಲಾವಣೆಗಳಾಗಿವೆ. ಆರ್ಥಿಕ ದುಸ್ಥಿಗೆ ತಲುಪಿದ್ದ ಭಾರತ ಇಂದು ವಿಶ್ವದಲ್ಲೇ ಐದನೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ಇದಕ್ಕೆ ಕಾರಣ ನಮ್ಮ ನೀತಿ, ನೇತೃತ್ವ ಹಾಗೂ ನಿಯತ್ತು ಈ ಬದಲಾವಣೆಗೆ ಕಾರಣ ಎಂದು ತಿಳಿಸಿದರು.
ದೇಶವೇ ಮೊದಲು, ಸಬ್ಕಾ ಸಾಥ್ ಸಬ್ಕಾ ವಿಕಾಸ, ಬಡವರಿಗೆ ಬಲ ತುಂಬುವುದು, ಭಯೋತ್ಪಾದನೆ, ಭ್ರಷ್ಟಾಚಾರದ ಬಗ್ಗೆ ಜಿರೋ ಟಾಲರೆನ್ಸ್ ನಮ್ಮ ನೀತಿಗಳಾಗಿವೆ. ಜಗತ್ತು ಗೌರವಿಸುವ ನೇತೃತ್ವ, ನಮ್ಮ ನೇತೃತ್ವ. ನಮ್ಮ ಪ್ರಧಾನಿ ಮೋದಿಯವರಿಗೆ ಜಗತ್ತಿನ 11 ರಾಷ್ಟ್ರಗಳು ತಮ್ಮ ದೇಶಗಳ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿವೆ. ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಹೋದರೂ ಭಾರತಕ್ಕೆ ವಿಶ್ವಮನ್ನಣೆ ತಂದುಕೊಟ್ಟ ನೇತೃತ್ವದ ನಮ್ಮದು ಎಂದು ಹೇಳಿದರು.
ಪ್ರಧಾನಿ ಮೋದಿಯವರು ಎರಡು ದಿನಗಳ ಹಿಂದೆ ಕೇಂದ್ರಿಯ ಕಾರ್ಯಾಲಯದಲ್ಲಿ ಭವಿಷ್ಯದ ಭಾರತ ಗಮನದಲ್ಲಿಟ್ಟುಕೊಂಡು ವಿಕಸಿತ ಭಾರತದ ಸಂಕಲ್ಪ ಪತ್ರ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ನಮ್ಮ ಪ್ರಣಾಳಿಕೆಯಲ್ಲಿ ವಿಶೇಷವಾಗಿ ಮೋದಿ ಗ್ಯಾರಂಟಿ ಇದೆ. ಪ್ರಾಣ ಹೋದ್ರೂ ಕೊಟ್ಟ ಮಾತು ಮೀರಬಾರದೆಂಬುದು, ಸುರಕ್ಷಿತ ಭಾರತ, ಸುಶಿಕ್ಷಿತ ಭಾರತ, ಸಮೃದ್ಧ ಭಾರತ, ಆತ್ಮನಿರ್ಭರ ಭಾರತ, ಮೋದಿ ಗ್ಯಾರಂಟಿಗಳಾಗಿವೆ, ಭಾರತ ವಿಶ್ವಗುರು ಆಗಬೇಕು ಎಂಬುದು ನಮ್ಮ ಗುರಿ. ಈ ರಿಪೋರ್ಟ್ ಕಾರ್ಡ್ ನಲ್ಲಿ ಹತ್ತು ವರ್ಷಗಳಲ್ಲಿ ನಾವು ಮಾಡಿರುವ ರಿಫಾರ್ಮ್, ಪರ್ಫಾರ್ಮ್ ಮತ್ತು ಟ್ರಾನ್ಸ್ಫಾರ್ಮ್ ಈ ತ್ರಿಸೂತ್ರದಲ್ಲಿ ನಾವು ಜನರ ಮುಂದೆ ಹೋಗಿ ಅವರ ಆಶಿರ್ವಾದ ಪಡೆಯುತ್ತೇವೆ ಎಂದರು.