ಡಿಬಿ ಮೈನ್ಸ್ ವ್ಯವಸ್ಥಾಪಕ ವೈ.ಪ್ರಕಾಶ ಹೇಳಿಕೆ
ನಿಮ್ಮ ಸುದ್ದಿ ಬಾಗಲಕೋಟೆ
ಸುರಕ್ಷತೆಯ ನಿಯಮ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ನಿಮ್ಮ ಸುರಕ್ಷತೆಯೇ ನಮ್ಮೆಲ್ಲರ ಆದ್ಯತೆ ಆಗಿದೆ ಎಂದು ದೊಡ್ಡಣ್ಣನವರ ಮೈನ್ಸ್ನ ವ್ಯವಸ್ಥಾಪಕ ವೈ.ಪ್ರಕಾಶ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ದೊಡ್ಡಣ್ಣನವರ ಮೈನ್ಸ್ನಲ್ಲಿ ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಂಪನಿಯಲ್ಲಿ ಕೆಲಸದ ಸಂದರ್ಭದಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಅಪಘಾತ ಸಂಭವಿಸಬಾರದೆAದು ಕಂಪನಿಯ ನಿಯಮಗಳನ್ನು ಪಾಲಿಸಬೇಕು ಎಂದರು.
ಸುರಕ್ಷತೆಯೇ ನಮ್ಮ ಜೀವನದ ಸೋಪಾನವಾಗಬೇಕು. ಮೆಕ್ಯಾನಿಕ್, ಲೋಡಿಂಗ್, ಟ್ರಾನ್ಸ್ಪೋರ್ಟ್ ಮತ್ತಿತರ ಕೆಲಸದ ಸಂದರ್ಭದಲ್ಲಿ ಜಾಗರೂಕತೆ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸುರಕ್ಷತೆಯಲ್ಲಿ ಆಲಸ್ಯ ತೋರಿದರೆ ಜೀವನವನ್ನೇ ನಿರ್ಲಕ್ಷಿಸಿದಂತಾಗುತ್ತದೆ. ಹೀಗಾಗಿ ಎಲ್ಲರೂ ಸುರಕ್ಷತೆಯತ್ತ ಗಮನ ಹರಿಸಬೇಕು ಎಂದರು.
ಲೇಜನಿಂಗ್ ವ್ಯವಸ್ಥಾಪಕ ನಾಗೇಶ ಹುಲ್ಲೂರ, ಸೀನಿಯರ್ ಮೆಕ್ಯಾನಿಕ್ ಹುಸೇನ್ ನದಾಫ್, ಭೂವಿಜ್ಞಾನಿ ಸುರೇಶ ಖೋತ್, ಎಸ್.ಎಸ್.ಬುಗಟಿ, ಕಾರ್ಮಿಕರು, ಸಿಬ್ಬಂದಿ ಇದ್ದರು.
ಸುರಕ್ಷತಾ ಸಪ್ತಾಹದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಸುರಕ್ಷತಾ ನಿಯಮಗಳನ್ನು ಸದಾ ಪಾಲಿಸುತ್ತ ಗಣಿಯಲ್ಲಿ ಯಾವುದೇ ರೀತಿಯ ಅಪಘಾತವಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.