ಹಳೆ ಬಾಗಲಕೋಟೆಯ ಶ್ರೀ ಚರಂತಿಮಠ, ತೆಂಗಿನಮಠಕ್ಕೆ ಭೇಟಿ
ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಶುಕ್ರವಾರ ಹಳೆ ಬಾಗಲಕೋಟೆಯಲ್ಲಿರುವ ಚರಂತಿಮಠ ಮತ್ತು ತೆಂಗಿನಮಠಕ್ಕೆ ಭೇಟಿ ನೀಡಿ ನಂತರ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ಮಾಡಿದರು
ಚರಂತಿಮಠಕ್ಕೆ ಭೇಟಿ ನೀಡಿ ಶ್ರೀ ಪ್ರಭುಸ್ವಾಮಿ ಚರಂತಿಮಠ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಕೆಲ ಸಮಯ ಮಠದಲ್ಲಿಕಾಲ ಕಳೆದು ಸ್ವಾಮೀಜಿ ಅವರೊಂದಿಗೆ ಔಪಚಾರಿಕವಾಗಿ ಚರ್ಚೆ ಮಾಡಿದರು. ನಂತರ ತೆಂಗಿನಮಠಕ್ಕೆ ಭೇಟಿ ನೀಡಿದರು.
ಮಠಗಳಿಗೆ ಭೇಟಿ ನೀಡಿದ ನಂತರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಕೆಲ ಮಹಿಳೆಯರು ಉಚಿತ ಬಸ್ ಪ್ರಯಾಣ ಮತ್ತು ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ 2 ಸಾವಿರ ರೂ. ಜಮಾ ಆಗುತ್ತಿರುವುದರಿಂದ ಕುಟುಂಬಕ್ಕೆ ಆಗಿರುವ ಅನುಕೂಲದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಹೊಂದಿರುವ ಕನಸುಗಳನ್ನು ವಿವರಿಸಿದ ಸಂಯುಕ್ತ ಪಾಟೀಲ ಅವರು, ಒಂದು ಅವಕಾಶ ನೀಡಿದರೆ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲ. ಬರಪರಿಹಾರ ನೆರವು ಕೋರಿದರೆ ಸ್ಪಂದಿಸಲಿಲ್ಲ. ಹುಸಿ ಭರವಸೆಗಳ ಮೂಲಕ ಮತದಾರರನ್ನು ಮರುಳು ಮಾಡುವುದನ್ನು ಕರಗತ ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದರು.