ಬಳ್ಳಾರಿ: ರಾಮಮಂದಿರ ನಿರ್ಮಾಣದಲ್ಲೂ ಹಗರಣ ನಡೆದಿದೆ ಎಂದು ಹೇಳಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಇದೀಗ ಸುಪ್ರೀಂ ಕೋಟ್೯ ಸೂಚಿಸಿದ ಜಾಗದಲ್ಲಿ ರಾಮ ಮಂದಿರ ಕಟ್ಟಿಲ್ಲ ಎಂದು ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಳೆದ 9 ವರ್ಷಗಳ ಕಾಲ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಮಾತನಾಡದೇ ಈಗ ನಾವೇ ಮಾಡಿದ್ದು, ನಮ್ಮಿಂದಲೇ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ .ಬಿಜೆಪಿ ಮುಖಂಡರು ಕೇವಲ ಹಿಂದು ಮುಸ್ಲಿಂ ಬಗ್ಗೆ ಬಿಟ್ಟರೆ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಈ ಹಿಂದೆ ಪ್ರಧಾನಿ ಮೋದಿ ಅವರು ಬುಲೆಟ್ ಟ್ರೈನ್ ಬಿಡುವುದಾಗಿ ಹೇಳುತ್ತಿದ್ದಂತೆ ನಾವು ಟಿಕೆಟ್ ತೆಗೆದುಕೊಂಡು ಕಾಯುತ್ತಿದ್ದೇವೆ.ಬಿಜೆಪಿಯಿಂದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದರೆ ಅವರಿಗೆ ಪ್ರಚಾರದ ಅವಶ್ಯಕತೆ ಇಲ್ಲ. ಆದರೆ, ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸದೆ ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದರು.
ಈಗಾಗಲೇ 65 ಸಾವಿರ ಕೋಟಿ ಪ್ರಚಾರಕ್ಕೆ ಖರ್ಚು ಮಾಡಿದ್ದಾರೆ. ಕಳೆದ ಹತ್ತು ವರ್ಷದಲ್ಲಿನ ಆಡಳಿತದಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆಯಾಗಬೇಕಿದ್ದು, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪುಲ್ವಾಮ ದಾಳಿಯನ್ನು ಮುಂದಿಟ್ಟುಕೊಂಡು ಗೆದ್ದ ಬಿಜೆಪಿ ಬಳಿಕ ದಾಳಿ ಕುರಿತು ಚರ್ಚೆ ಮಾಡುತ್ತಿಲ್ಲ ಎಂದು ತಿಳಿಸಿದರು.