ಬೆಂಗಳೂರು: ಮುಂದಿನ 4 ವರ್ಷಗಳ ಕಾಲ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ರಾಜ್ಯ ಸುತ್ತಿದ ಅನುಭವಸ್ಥರಿಗೆ ರಾಜ್ಯ ಕಾಂಗ್ರೆಸ್ ಸಾರಥ್ಯ ಸಿಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ. ಅದು ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟ ವಿಚಾರ. ಹೊಸ ಅಧ್ಯಕ್ಷರ ನೇಮಕಕ್ಕೆ ರಾಜ್ಯ ಸುತ್ತಿದ್ದ ಹಾಗೂ ಸಮರ್ಥರಿಗೆ ಅವಕಾಶ ನೀಡಬೇಕು. ಮುಂದಿನ ನಾಲ್ಕು ವರ್ಷ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಶಕ್ತಿ ಇರುವವರು ಅಧ್ಯಕ್ಷರಾಗಲಿ,” ಎಂದು ಹೇಳಿದರು.
”ರಾಜ್ಯ ವಿಧಾನಸಭೆಯಿಂದ ಮೇಲ್ಮನೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕೇವಲ ಬೆಂಗಳೂರಿನವರಿಗೆ ಅವಕಾಶ ಕೊಡುತ್ತಾ ಹೋಗುವುದು ಸರಿಯಲ್ಲ. ಉತ್ತರ ಕರ್ನಾಟಕ ಭಾಗದವರಿಗೆ ಸೂಕ್ತ ಅವಕಾಶ ಸಿಗಬೇಕು. ಅದರಿಂದ ಪಕ್ಷ ಸಂಘಟನೆ ಕೆಲಸಕ್ಕೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆ ಕೆಲಸದಲ್ಲಿ ದುಡಿಯುತ್ತಿರುವ ಅರ್ಹರನ್ನು ಗುರುತಿಸಿ ಅವಕಾಶ ಕೊಡಬೇಕು,” ಎಂದು ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದರು.
ಲೋಕಸಭೆ ಚುನಾವಣೆವರೆಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂಬ ಎಐಸಿಸಿ ಹೈಕಮಾಂಡ್ ಘೋಷಣೆ ಅವಧಿ ಮುಗಿದ ಬೆನ್ನಲ್ಲೇ, ಜಾರಕಿಹೊಳಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ ಎಂದು ಮಾಹಿತಿ ತಿಳಿದು ಬಂದಿದೆ.