ಬಾಗಲಕೋಟೆ:
ರಾಜ್ಯ ಮಹಿಳಾ ಅಬಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯ್ಕೆ ಪ್ರಕ್ರಿಯೆ ಜರುಗಿತು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ದೇವದಾಸಿ ಪುನರ್ವಸತಿ ಯೋಜನೆಯಡಿ ಆದಾಯೋತ್ಪನ್ನ ಚಟುವಟಿಕೆ ಯೋಜನೆ, ಧನಶ್ರೀ ಯೋಜನೆ, ಉದ್ಯೋಗಿನಿ ಯೋಜನೆ, ಚೇತನ ಯೋಜನೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಬಂದ ಅರ್ಜಿಗಳನ್ನು ಇಡಲಾಗಿತ್ತು. ಪ್ರತಿ ಯೋಜನೆಗಳಿಗೆ ನೀಡಲಾದ ಗುರಿಗೆ ಅನುಗುಣವಾಗಿ ಲಾಟರಿ ಮೂಲಕ ಚೀಟಿ ಎತ್ತಿ ಫಲಾನುಭವಿಗಳ ಆಯ್ಕೆ ಮಾಡಲಾಯಿತು.
ದೇವದಾಸಿ ಪುನರ್ವಸತಿ ಯೋಜನೆಯಡಿ ಎಲ್ಲ ತಾಲೂಕು ಸೇರಿ ಒಟ್ಟು ೫೪ ಗುರಿಗೆ ಒಟ್ಟು ೨೬೨ ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ ೧೨೫ ತಿರಸ್ಕೃತಗೊಂಡಿದ್ದವು. ಧನಶ್ರೀ ಯೋಜನೆಯಡಿ ೬೮ ಗುರಿ ಇದ್ದು, ಒಟ್ಟು ೨೯೬ ಅರ್ಜಿಗಳು ಸ್ವೀಕೃತವಾಗಿದ್ದವು. ಅದರಲ್ಲಿ ೨೭ ಅರ್ಜಿ ತಿರಸ್ಕೃತಗೊಂಡಿದ್ದವು. ಉದ್ಯೋಗಿನಿ ಯೋಜನೆಯಡಿ ದಮನಿತ ಮಹಿಳೆ ೪ ಗುರಿಗೆ ೪ ಅರ್ಜಿ, ಎಚ್.ಐವಿ ಸೋಂಕಿತ ಮಹಿಳೆರಿಂದ ೪ ಗುರಿಗೆ ೫ ಅರ್ಜಿ ಬಂದಿದ್ದು, ಅದರಲ್ಲಿ ೨ ಅರ್ಜಿ ತಿರಸ್ಕೃತಗೊಂಡಿದ್ದವರು. ಲಿಂಗತ್ವ ಅಲ್ಪಸಂಖ್ಯಾತರಿAದ ೧ ಗುರಿಗೆ ೧೫ ಅರ್ಜಿ ಬಂದಿದ್ದು, ಅದರಲ್ಲಿ ೯ ತಿರಸ್ಕೃತಗೊಂಡಿದ್ದವು.
ಚೇತನ ಯೋಜನೆಯಡಿ ಪರಿಶಿಷ್ಟ ಜಾತಿಗೆ ೧೨ ಗುರಿಗೆ ಸ್ವೀಕೃತಗೊಂಡ ೪೦೧ ಅರ್ಜಿ ಪೈಕಿ ೩೮೮ ತಿರಸ್ಕೃತಗೊಂಡರೆ, ಪರಿಶಿಷ್ಟ ಪಂಗಡಕ್ಕೆ ೭ ಗುರಿಗೆ ೪೬ ಅರ್ಜಿ ಬಂದಿದ್ದು, ೪೬ ಅರ್ಜಿ ತಿರಸ್ಕೃತಗೊಂಡಿದ್ದವು. ಇತರೆಯಲ್ಲಿ ೧೯ ಗುರಿಗೆ ೨೯೮ ಅರ್ಜಿಗಳು ಸ್ವೀಕೃತೊಂಡಿದ್ದು, ಅದರಲ್ಲಿ ಒಂದು ಮಾತ್ರ ಸರಿ ಇದ್ದು, ಉಳಿದವು ತಿರಸ್ಕೃತಗೊಂಡಿವೆ. ಒಟ್ಟಾರೆಯಾಗಿ ಈ ಯೋಜನೆಯಡಿ ೩೮ ಗುರಿಗೆ ೭೪೫ ಅರ್ಜಿಗಳು ಸ್ವೀಕೃತಗೊಂಡು ಅದರಲ್ಲಿ ೧೪ ಸರಿ ಇದ್ದು ಉಳಿದ ೭೩೧ ಅರ್ಜಿ ತಿರಸ್ಕೃತಗೊಂಡಿದ್ದವು. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ೩೬ ಗುರಿಗೆ ೪೪ ಅರ್ಜಿ ಸ್ವೀಕೃತಗೊಂಡು ಅದರಲ್ಲಿ ೨೫ ಸರಿ ಇದ್ದು, ೧೯ ತಿರಸ್ಕೃತಗೊಂಡಿದ್ದವು.
ವಿವಿಧ ಯೋಜನೆಗಳ ಆಯ್ಕೆ ಸಮಿತಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಅಮರೇಶ ಎಚ್, ಸಮಾಜ ಕಲ್ಯಾನ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಪೊಲೀಸ್, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮಿಲನ ಸಂಘದ ಸಮೀರ ಕರ್ಜಗಿ, ಚೈತನ್ಯ ಮಹಿಳಾ ಸಂಘದ ಮಧು ನಡುವಿನಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸವಿತಾ ಮಹರ್ಷಿ ಜಯಂತಿ
ಬಾಗಲಕೋಟೆ: ಜಿಲ್ಲಾಡಳಿತದ ವತಿಯಿಂದ ಸವಿತಾ ಮಹರ್ಷಿ ಜಯಂತಿಯನ್ನು ಜಿಲ್ಲಾ ಪಂಚಾಯತ ಹಳೆ ಸಭಾಭವನದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸವಿತಾ ಮಹಿರ್ಷ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಸಮುದಾಯ ವಿವಿಧ ಮುಖಂಡರು ಇದ್ದರು. ಸವಿತಾ ಮಹರ್ಷಿಯ ಪೊಟೋಗಳನ್ನು ಬಿಡುಗಡೆ ಮಾಡಲಾಯಿತು.
೧೯ ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ
ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆಬ್ರವರಿ ೧೯ ರಂದು ಬೆಳಿಗ್ಗೆ ೧೦.೩೦ಕ್ಕೆ ಜಿಲ್ಲಾ ಪಂಚಾಯತ ಹಳೆಯ ಸಭಾಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕರು ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನವದೆಹಲಿಯ ರಾಜ್ಯ ವಿಶೇಷ ಪ್ರತಿನಿಧಿ-೨ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ, ಹುನಗುಂದ ಶಾಸಕ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ.