ಬಾಗಲಕೋಟೆ
ಪೊಲೀಸ್ ಕಾರ್ಯನಿರ್ವಹಣೆಯಲ್ಲಿ ಸೂಕ್ಞ್ಮತೆಯ ಜ್ಞಾನ ಪ್ರಮುಖ ಪಾತ್ರವಹಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಹೇಳಿದರು.
ನವನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಘಟಕದ ಕಾರ್ಯನಿರ್ವಹಣೆ, ಮಕ್ಕಳ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015, ಬಾಲ್ಯ ವಿವಾಹ ನಿಷೇದ ಕಾಯ್ದೆ 2006 ಹಾಗೂ ಪೋಕ್ಸೋ ಕಾಯ್ದೆ 2012 ರ ಕುರಿತು ಜಿಲ್ಲೆಯ ಪೊಲಿಸ್ ಠಾಣೆಗಳ ಸಿಡಬ್ಲ್ಯೂಓ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿಗಳು ಪ್ರಕರಣಗಳ ಸೂಕ್ಷ್ಮತೆಯನ್ನು ಅರಿಯಬೇಕು, ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳನ್ನೆರಡೂ ಗಂಬೀರವಾಗಿ ಪರಿಗಣಿಸಬೇಕು. ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುಸುವುದು ಸುಲಭ. ಆದರೆ ಪೋಕ್ಸೋ ಮತ್ತು ಬಾಲ್ಯ ವಿವಾಹ ಪ್ರಕರಣಗಳಲ್ಲಿ 18 ವರ್ಷದೊಳಗಿನ ಮಕ್ಕಳು ಇರುವದರಿಂದ ಅವರ ಮುಂದಿನ ಭವಿಷ್ಯದ ದೃಷ್ಠಿಯಿಂದ ಸಾಧಕ ಬಾಧಕಗಳನ್ನು ತಿಳಿದು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ಜಿಲ್ಲಾದಿಕಾರಿ ಜಾನಕಿ ಕೆ.ಎಮ್. ಮಾತನಾಡಿ ಪೊಲೀಸ್ ಅಧಿಕಾರಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಕೆಲಸಮಾಡಬೇಕು. ಮಹಿಳೆಯರು ಮತ್ತು ಮಕ್ಕಳು ಠಾಣೆಗೆ ಬಂದಾಗ ಅವರ ಸಮಸ್ಯಗೆ ಸ್ಪಂದನೆ ಇರಲಿ. ಎಲ್ಲ ಅಧಿಕಾರಿಗಳಿಗೂ ತಮ್ಮ ಬಾಲ್ಯ ಜೀವನ ಗೊತ್ತಿರುವಂತಹದ್ದು. ಇಲ್ಲಿವರೆಗೂ ಮಗು ಬಂದಿದೆ ಎಂದರೆ ಆ ಮಗು ಎಷ್ಟು ಕುಗ್ಗಿ ಹೋಗಿರಬಹುದೆಂದು ಅರಿಯಬೇಕು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಪೊಲೀಸ್ ಠಾಣಾಧಿಕಾರಿಗಳು ತಮ್ಮ ಕೆಳ ಹಂತದ ಸಿಬ್ಬಂದಿಯನ್ನು ಸಂಪೂರ್ಣವಾಗಿ ಅವಲಂಬಿಸದೇ ಪ್ರಕರಣಗಳನ್ನು ಖುದ್ದಾಗಿ ಅಧ್ಯಯನ ಮಾಡಬೇಕು. ಪೋಕ್ಸೋ, ಮಕ್ಕಳ ನ್ಯಾಯ ಕಾಯ್ದೆ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು. ಬಾಲ್ಯ ವಿವಾಹ ಎಂದು ನಿರ್ಲಕ್ಷಿಸುವಂತಿಲ್ಲ. ಪೊಲೀಸ್ ಅಧಿಕಾರಿಗಳಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪಾ ಎಸ್.ಬಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಪೊಲೀಸ್‍ರ ಮೇಲಿದೆ. ಅಪರಾದ ಪ್ರಕರಣಗಳಲ್ಲಿ ತನಿಖಾ ವರದಿ ಪ್ರಮುಖ ಪಾತ್ರವಹಿಸುತ್ತದೆ. ತನಿಖೆ ಯಾವ ರೀತಿಯಲ್ಲಿ ಆಗುತ್ತದೆಯೋ ಅದೇ ರೀತಿ ನ್ಯಾಯಾಲಯದಿಂದ ತೀರ್ಪು ಬರುತ್ತದೆ. ದಿನದಿಂದ ದಿನಕ್ಕೆ ಅಪರಾದ ಪ್ರಕರಣಗಳು ಸವಾಲಿನ ಮಟ್ಟಕ್ಕೆ ಬಂದಿವೆ. ಸವಾಲುಗಳನ್ನೆಲ್ಲ ಎದುರಿಸಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವ ಹೊಣೆ ನಿಮ್ಮ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಟುಂಬ ನ್ಯಾಯಾಲಯ ಜಿಲ್ಲಾ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ ಕ್ರಿಮಿನಲ್ ಪ್ರಕರಣಗಳ ತನಿಖೆ ಮತ್ತು ವರದಿ ಸಲ್ಲಿಕೆ, ಸರಕಾರಿ ಅಭಿಯೋಜಕ ವಿ.ಜಿ. ಹೆಬಸೂರ ವಿಶೇಷ ಪ್ರಕರಣಗಳ್ಲಿ ತನಿಕೆ, ಪೊಲೀಸ್ ತರಬೇತುದಾರ ರೋಹಿತ್ ಸಿ.ಜೆ. ಪೊಲೀಸ್ ಘಟಕದ ಕಾರ್ಯನಿರ್ವಹಣೆ, ಬಾಲನ್ಯಾಯ ಕಾಯ್ದೆ-2015, ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಪೋಕ್ಸೋ ಕಾಯ್ದೆ-2012 ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅಕ್ಕಮಹಾದೇವಿ ಕೆ.ಹೆಚ್ ಸೇರಿದಂತೆ ಇತರರು ಉಪಸ್ಥಿತರಿದ್ದರು.