ಬಾಗಲಕೋಟೆ
ಜಿಲ್ಲಾ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ಘೋಷಣೆಯಾಗಿದ್ದು ಶಾಂತ ಸ್ವಭಾವದಿಂದ ಗುರುತಿಸಿಕೊಂಡಿರುವ, ಜಾಣ ನಡೆಯ ಶಾಂತಗೌಡ ತೀರ್ಥಗೌಡ ಪಾಟೀಲರವರನ್ನೇ ರಾಜ್ಯ ಭಾಜಪ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮುಂದುವರೆಸಿದೆ.
ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಹೈಕಮಾಂಡ್ ಜಿಲ್ಲೆಯ ಎಲ್ಲ ಹಾಲಿ, ಮಾಜಿ ಚುನಾಯಿತ ಪ್ರತಿನಿಧಿಗಳ ಆದಿಯಾಗಿ, ವಿಭಾಗ ಪ್ರಮುಖರ, ಜಿಲ್ಲೆಯ ಪ್ರಮುಖರ, ಹಿರಿಯ ಪದಾಧಿಕಾರಿಗಳ ಜೊತೆ ವಿಚಾರಿಸಿ ಸಲಹೆ ತೆಗೆದುಕೊಂಡು ಜಿಲ್ಲೆಯಲ್ಲಿ ಕಾರ್ಯಕರ್ತ ಪ್ರಿಯ ಹಾಲಿ ಜಿಲ್ಲಾಧ್ಯಕ್ಷ ಶಾಂತಗೌಡರನ್ನೇ ಮುಂದುವರೆಸುವ ಉತ್ತಮ ನಿರ್ಣಯ ತೆಗೆದುಕೊಂಡಿದೆ ಎಂದು ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಂತಗೌಡ ಪಾಟೀಲರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ಬರಲಿರುವ ಲೋಕಸಭಾ ಚುನಾವಣೆ ಇರಬಹುದು ಅಥವಾ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಕಾರ್ಯ ಇರಬಹುದು ಉತ್ತಮ ಸಂಘಟಕ ಎಂದೇ ಬಿಂಬಿತವಾಗಿರುವ ಶಾಂತಗೌಡರ ನೇತೃತ್ವದಲ್ಲಿ ಬಿಜೆಪಿ ಅತ್ಯುತ್ತಮವಾಗಿ ಹೊರಹೊಮ್ಮಲಿದೆ ಎಂದಿದ್ದಾರೆ.
ಶಾಂತಗೌಡರ ನೇಮಕಕ್ಕೆ ಜಿಲ್ಲೆಯ ಎಲ್ಲ ಪದಾಧಿಕಾರಿಗಳು, ಪ್ರಮುಖರು, ಹಿರಿಯರು, ಕಾರ್ಯಕರ್ತರು, ಪಕ್ಷದ ಹಿತೈಷಿಗಳು, ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಕೂಡ ತಿಳಿಸಿದ್ದಾರೆ.