ಉಡುಪಿ: ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮಾನಸಿಕತೆ ಇದ್ದವರನ್ನು ಪೊಲೀಸರು ವಿಧಾನಸೌಧ ಒಳಗೆ ಹೇಗೆ ಬಿಟ್ಟರು?. ರಾಜ್ಯಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸಯ್ಯದ್ ನಾಸೀರ್ ಹುಸೇನ್ ಬೆಂಬಲಿಗರ ಸಂಪರ್ಕ ಯಾರ ಜೊತೆ ಇದೆ? ಅಲ್ಲಿ ಬಂದಿರುವ ಯುವಕರ ಸಂಪರ್ಕ ಯಾರ ಜೊತೆ ಇದೆ? ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರದ ಗುಮಾನಿ ಇದೆ. ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ. ಯಾವುದೇ ಸರ್ಕಾರಕ್ಕೆ ಅಧಿಕಾರ ಶಾಶ್ವತವಲ್ಲ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಪ್ರಕರಣವನ್ನು ಎನ್ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರಲಿದೆ. ಇದರ ಹಿಂದಿರುವ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಬೇಕು ಎಂದರು.
ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆರೋಪಿಯನ್ನ ಬಂಧಿಸುವಂತೆ ಕೇಳಿಕೊಂಡಿದ್ದೇನೆ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಅಡ್ಡ ಮತದಾನ ಮಾಡಿದವರ ಮೇಲೆ ಜನ ಕ್ರಮ ಕೈಗೊಳ್ಳುತ್ತಾರೆ. ಚುನಾವಣಾ ಆಯೋಗ, ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂದು ವಿವರಿಸಿದರು.