ವಿಜಯಪುರ : ದೇಶದಲ್ಲಿ ಚುನಾವಣಾ ಕಾವೇರಿದ್ದು, ಗುರುವಾರ ಅಥವಾ ಶುಕ್ರವಾರ ಚುನಾವಣಾ ಆಯೋಗದಿಂದ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ದೊಡ್ಡ ಪ್ರಜಾತಂತ್ರದ ಚುನಾವಣೆ. ಎಲ್ಲ ವರ್ಗದವರಿಗೂ ಮತದಾನದ ಹಕ್ಕು ನೀಡಲಾಗಿದ್ದು, ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಲಿದ್ದು, ಇಸ್ ಬಾರ್ ಚಾರ್ ಸೌ ಪಾರ್. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. ಜನರು ಮೋದಿಗೆ ಬೆಂಬಲ ನೀಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 370 ಕಲಂ ಬದಲಾವಣೆ ಮಾಡಿದ್ದೇವೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ದೇಶದ ಗೌರವ, ಭದ್ರತೆಗಾಗಿ ಮೋದಿ ಕೆಲಸ ಮಾಡಿದ್ದು, ಹಿಂದಿನ ಯುಪಿಎ ಸರ್ಕಾರವನ್ನು ಗೋಟಾಲಾ ಸರ್ಕಾರ ಎನ್ನಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಧಾನಿ ಹೋದರೆ ಎದ್ದು ನಿಂತು ಗೌರವ ಕೊಡುತ್ತಿರಲಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಎಲ್ಲ ಬದಲಾಗಿದೆ. ದೇಶದ ಸೈನ್ಯದ ದಿಕ್ಕು ಬದಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿದೆ. ಯಾವುದೇ ದೇಶಕ್ಕೆ ಹೋದರೂ ಭಾರತಕ್ಕೆ ಗೌರವ ಸಿಗುತ್ತಿದೆ. ಇದಕ್ಕೆಲ್ಲ ಪ್ರಧಾನಿ ಮೋದಿ ಅವರು ಕಾರಣ ಎಂದು ತಿಳಿಸಿದರು.
ಬಡತನ ರೇಖೆಗಿಂತ ಕೆಳಗಿನರನ್ನು ಮೇಲೆಕ್ಕೆತ್ತಲಾಗಿದ್ದು, ರೈತರಿಗೆ ಮೋದಿ ಸಹಾಯ ಮಾಡಿದ್ದಾರೆ. 11 ನೇ ಆರ್ಥಿಕ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೇರಿದೆ. 2047 ಕ್ಕೆ ಭಾರತ ವಿಶ್ವಗುರು ಆಗಲಿದೆ ಎಂದ ಅವರು, ವಿಮಾನ ನಿಲ್ದಾಣಗಳನ್ನು, ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚಳ ಮಾಡಿದ್ದೇವೆ. ರೈಲ್ವೇಗೆ ಹೊಸ ಕಾಯಕಲ್ಪ ನೀಡಲಾಗಿದೆ. ವಂದೇ ಭಾರತ್ ರೈಲ್ವೇ ಯೋಜನೆ ಮಾಡಲಾಗಿದೆ. ಎಲ್ಲಾ ರಂಗಗಳಲ್ಲಿ ಭಾರತ ಸಾಧನೆ ಮಾಡಿದೆ ಎಂದು ಸೂಚಿಸಿದರು.