ಬಾಗಲಕೋಟೆ : ತಾಲೂಕಿನ ಸುಕ್ಷೇತ್ರ ಕಿರಸೂರು ಗ್ರಾಮದ ಶ್ರೀ ಗೌರಿಶಂಕರ ಬಿಲ್ವಾಶ್ರಮ ಬ್ರಹನ್ಮಠಕ್ಕೆ ನಿಯೋಜಿತ ಉತ್ತರಾಧಿಕಾರಿಗಳನ್ನಾಗಿ ಶ್ರೀ ಸಿದ್ಧಲಿಂಗ ದೇವರನ್ನು ಶ್ರೀಮಠದ ಭಕ್ತರ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.
ಶ್ರೀಮಠದ ಶ್ರೀ ಗೌರಿಶಂಕರ ಶಿವಯೋಗಿಳು ಲಿಂಗೈಕ್ಯರಾದ ನಂತರ ಸುಮಾರು 40 ವರ್ಷವಾದರೂ ಶ್ರೀಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಿರಲಿಲ್ಲ. ಸೆ.11 ರಂದು ಕಿರಸೂರ ಗ್ರಾಮದ ಎಲ್ಲ ಹಿರಿಯರು – ಭಕ್ತರು ಕೂಡಿಕೊಂಡು ಗುಳೇದಗುಡ್ಡದ ಶ್ರೀ ಸದಾನಂದ ಶಿವಯೋಗಿ ಮಠದ ಶ್ರೀ ನಾಗಭೂಷಣ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮದ ವೇ. ಮೂ. ರುದ್ರಸ್ವಾಮಿ- ಸರೋಜಮ್ಮನವರ ಸುಪುತ್ರ ಶ್ರೀ ಸಿದ್ಧಲಿಂಗ ದೇವರನ್ನು ಕಿರಸೂರ ಗೌರಿಶಂಕರ ಮಠಕ್ಕೆ ನಿಯೋಜಿತ ಉತ್ತರಾಧಿಕಾರಿಗಳನ್ನಾಗಿ ಶ್ರೀ ಮಠದ ಭಕ್ತರ, ಕಿರಸೂರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಕಲ ಸದ್ಭಕ್ತರ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಉತ್ತರಾಧಿಕಾರಿಗಳಾದ ಶ್ರೀ ಸಿದ್ದಲಿಂಗ ದೇವರು, ಶ್ರೀ ಗೌರಿಶಂಕರ ಶಿವಯೋಗಿಗಳ ತಪೋ ತಾಣವಾಗಿದೆ. ಲಿಂ: ಗೌರಿಶಂಕರ್ ಶಿವಯೋಗಿಗಳು ಸದಾಕಾಲ ಲಿಂಗಪೂಜೆ, ಧ್ಯಾನ, ಪ್ರಾರ್ಥನೆ ಹಾಗೂ ಸಮಾಜೋದ್ದಾರ ಮಾಡುತ್ತ-ಜಗವ ಗೆದ್ದ ವೀರ ವೀರಾಗಿಗಳು ಮಹಾನ್ ಆಯುರ್ವೇದ ಪಂಡಿತರಾಗಿದ್ದರು. ಭಕ್ತರಿಗೆ ತಮ್ಮ ಲಿಂಗ ಹಸ್ತದಿಂದ ಆಶೀರ್ವಾದಿಸಿ-ಆಯುರ್ವೇದ ಮೂಲಕ ಜನರ ಸಮಸ್ಯೆಗಳನ್ನು ನಿವಾರಿಸಿ ಭಕ್ತರ ಪಾಲಿನ ಭಾಗ್ಯದ ನಿಧಿಯಾಗಿದ್ದರು. ಅವರ ಮಾರ್ಗದಂತೆ ಶ್ರೀಮಠದ ಧಾರ್ಮಿಕ, ಸಾಮಾಜಿಕ ಕಾರ್ಯಚಟು ಕೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಕಿರಸೂರ ಗ್ರಾಮದ ಶ್ರೀಮತಿ ಅವಕ್ಕ ಶಿವಯೋಗಿ ಎಂಬ ಭಕ್ತೆ ದಾನ ಕೊಟ್ಟ ಭೂಮಿಯಲ್ಲಿ ಗೌರಿಶಂಕರ ಸ್ವಾಮಿಗಳು ನೂರಾರು ಪತ್ರಿಗಿಡಗಳನ್ನ ನೆಟ್ಟು ಬಿಲ್ವಾಶ್ರಮವನ್ನು ನಿರ್ಮಿಸಿದರು. ಕರ್ನಾಟಕ- ಮಹಾರಾಷ್ಟ್ರ ಹೀಗೆ ಹೊರ ರಾಜ್ಯಗಳಿಂದ ಭಕ್ತರು ಗುರುವಿನ ದರ್ಶನಕ್ಕೆ ಬರತೋಡಗಿದರು ಅಂದಿನಿಂದ ಶ್ರೀ ಗೌರಿಶಂಕರ ಬಿಲ್ವಾಶ್ರಮ ಬ್ರಹನ್ಮಠವು ಸಾರ್ವಜನಿಕ ಮಠವಾಗಿ ಬೆಳುದು ಬಂದಿದೆ ಎಂದರು.