ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್ ಮಾಡಲಾಗ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಆಪರೇಷನ್ ಕಮಲ ಶುರುಮಾಡಿದ್ದು ಬಿಜೆಪಿ. ಇವತ್ತೂ ಕೂಡಾ ಈ ಪ್ರಯತ್ನ ನಡೆಯುತ್ತಿದೆ. ಇವಾಗ ಐವತ್ತು ಕೋಟಿ ಆಫರ್ದಾರಿ ನೀಡ್ತಿದ್ದಾರೆ ಶಾಸಕರಿಗೆ. ರಾಜೀನಾಮೆ ಕೊಡಿ, ಚುನಾವಣಾ ಖರ್ಚು ನಾವೇ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಕೊಡ್ತಾರೆ ಎಂದು ಆರೋಪಿಸಿದರು. ಈ ಹಣ ಎಲ್ಲಿಂದ ? ಇದು ಕಪ್ಪು ಹಣ ಅಲ್ಲವೇ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ನಡೆ ಖಂಡನೀಯ ಎಂದರು. ಇಡಿ, ಐಟಿ ದಾಳಿ ಕೇವಲ ವಿರೋಧ ಪಕ್ಷಗಳ ಮೇಲೆ ಏಕೆ? ಬಿಜೆಪಿಯ ಮೇಲೆ ಏಕಿಲ್ಲ? ಬಿಜೆಪಿ ಭ್ರಷ್ಟಾಚಾರದ ಪಿತಾಮಹ. ಬಿಜೆಪಿ ಪ್ರಜಾಪ್ರಭುತ್ವ ಮೌಲ್ಯವನ್ನು ನಾಶ ಮಾಡ್ತಿದೆ. ಜನರ ಅಭಿಪ್ರಾಯ ಅವರ ಪರವಾಗಿ ಇಲ್ಲ ಎಂದು ಗೊತ್ತಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನೇಕ ರಾಜಕೀಯ ಪಕ್ಷಗಳು ಇವೆ. ಸಂವಿಧಾನ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ಬಿಜೆಪಿ ಸಕ್ರಿಯವಾಗಿರಲಿಲ್ಲ ಎಂದು ಆರೋಪಿಸಿದರು.
ಅದಕ್ಕಾಗಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ. ಸಂವಿಧಾನ ಬದಲಾವಣೆ ಮಾಡುವ ಹಿಡನ್ ಅಜೆಂಡಾ ವನ್ನು ಬೇರೆಯವರ ಮೂಲಕ ಹೇಳಿಸುತ್ತಿದ್ದಾರೆ. ಬಿಜೆಪಿ ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟಿದೆ ಎಂದು ವಾಗ್ದಾಳಿ ನಡೆಸಿದರು.