ಬೆಂಗಳೂರು: ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಪಕ್ಷದ ಬಡವರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಬಡವರಿಗೆ ಪ್ರಯೋಜನವಾಗುತ್ತಿದೆ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದರು.
ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳ ಅಧ್ಯಯನ ಮತ್ತು ಶಿಫಾರಸ್ಸುಗಳ ಮೇರೆಗೆ ರೈತರಿಗೆ ಉಪಯೋಗವಾಗಲು ಕೃಷಿಭಾಗ್ಯ ಯೋಜನೆ ತಮ್ಮ ಮೊದಲ ಅವಧಿಯಲ್ಲಿ ಜಾರಿ ಮಾಡಲಾಗಿತ್ತು, ಆದರೆ ರೈತರ ಬಗ್ಗೆ ಕಾಳಜಿಯಿರದ ಬಿಜೆಪಿ ಸರ್ಕಾರ, ಅದನ್ನು ಕೇವಲ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದು ಎಂಬ ಕಾರಣಕ್ಕೆ ನಿಲ್ಲಿಸಿತ್ತು ಎಂದು ತಿಳಿಸಿದರು.
ಬಿಜೆಪಿ ಜೊತೆ ಸಂಘರ್ಷ ಇಟ್ಟುಕೊಂಡಿರುವುದಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ತಮ್ಮ ಸರ್ಕಾರ ಯಾರ ಜೊತೆಯೂ ಸಂಘರ್ಷ ಇಟ್ಟುಕೊಳ್ಳಲ್ಲ, ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ತಮಗೆ ಸಿಗಬೇಕಿರುವುದನ್ನು ಕೇಳುತ್ತಿದ್ದೇವೆ ಎಂದು ಹೇಳಿದರು.
2023-24 ಸಾಲಿನಲ್ಲಿ ಕರ್ನಾಟಕದಿಂದ ತೆರಿಗೆಗಳ ಮೂಲಕ ಕೇಂದ್ರಕ್ಕೆ 4 ಲಕ್ಷ 30 ಸಾವಿರ ಕೋಟಿ ರೂ. ಹೋಗಿದೆ,ಡಿವೋಲಷನ್ ಅಫ್ ಟ್ಯಾಕ್ಸಸ್ ಅಡಿ ಕೇಂದ್ರ ಕರ್ನಾಟಕಕ್ಕೆ ಕೇಂದ್ರ ನೀಡುತ್ತಿರೋದು ಕೇವಲ ರೂ. 37,252 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ರೂಪದಲ್ಲಿ ರೂ. 13,005 ಕೋಟಿ ಮಾತ್ರ, ಎರಡನ್ನೂ ಸೇರಿಸಿದಾಗ ರಾಜ್ಯಕ್ಕೆ ಸಿಗೋದು ಕೇವಲ 50,000 ಕೋಟಿ ರೂ. ಅಷ್ಟೇ ಎಂದು ವಿವರಿಸಿದರು.