ಅಮೀನಗಡ
ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಜ.14 ಹಾಗೂ 15 ರಂದು ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರಸಿದ್ಧ ಕ್ಷೇತ್ರವಾದ ಸಿದ್ದನಕೊಳ್ಳದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ನಡೆಸಲಾಗುತ್ತಿದ್ದು ಈ ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವು ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಕೊಡಲಾಗುವುದು. ಈ ಸಲದ ರಾಷ್ಟ್ರೀಯ ಪ್ರಶಸ್ತಿಯನ್ನು ಚಿತ್ರ ನಿರ್ದೇಶಕ ರವಿ ಬಸರೂರ ಹಾಗೂ ರಾಜ್ಯ ಪ್ರಶಸ್ತಿಯನ್ನು ಚಲನಚಿತ್ರ ಸಾಹಿತಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ರಾಜು ಅವರಿಗೆ ನೀಡಲಾಗುವುದು ಎಂದರು.
ಸಂಗಣ್ಣ ತುರಡಗೇರಿ, ಸಂಗಮೇಶ ಹುದ್ದಾರ, ಪ್ರಭು ಗಂಜಿಹಾಳ, ಹುಲ್ಲಪ್ಪ ಹಳ್ಳೂರ, ಹನುಮಂತ ಬಂಡಿ, ವೀರೂ ಐಹೊಳೆ, ಮಹೇಶ ವಡ್ಡರ ಇತರರಿದ್ದರು.