ಬೆಂಗಳೂರು: ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ವೇಳೆ ಮಳೆರಾಯ ಅಡ್ಡಿಪಡಿಸಿದ್ದು, ನಗರದ ಹಲವೆಡೆ ಜಿಟಿಜಿಟಿ ಮಳೆ ಶುರುವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಇನ್ನು ನಗರದಲ್ಲಿ ಬೆಳಿಗ್ಗೆಯಿಂದಲೇ ನಗರದಲ್ಲಿ ಎಲ್ಲೆಡೆ ಮೋಡ ಕವಿದ ವಾತಾವರಣವಿತ್ತು. ಸದ್ಯ ಮಳೆ ಆದರೂ ಕೂಡ ಇನ್ನು ಮೋಡ ಕವಿದ ವಾತಾವರಣವಿದ್ದು ಸಂಜೆ ಮತ್ತೆ ಮಳೆ ಆಗುವ ಸಾಧ್ಯತೆ ಇದೆ.
ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಬೆಳ್ಳಂದೂರು, ಯಮಲೂರು, ದೊಮ್ಮಲೂರು, ಅಗರ ಸುತ್ತಮುತ್ತ ಮಳೆ ಧಾರಾಕಾರ ಮಳೆ ಆಗಿದೆ. ಹೀಗಾಗಿ ಸಿಟಿ ರೌಂಡ್ಸ್ ಮೊಟಕುಗೊಳಸಿದರು.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಹಲವೆಡೆ ಅವಾಂತರಗಳೇ ಸಂಭವಿಸಿವೆ. ಪ್ರತಿಷ್ಠಿತ ವಿಲ್ಲಾಗಳೇ ನೀರುಪಾಲಾಗಿವೆ. ಮಳೆಯಿಂದಾಗಿ ಬೆಳೆಗಳೆಲ್ಲಾ ನಾಶವಾಗಿವೆ. ರಸ್ತೆಗಳು ಕೆರೆಗಳಂತಾಗಿವೆ. ಮನೆಯ ಮುಂದೆ ನದಿಯಂತೆ ನೀರು ಹರಿಯುತ್ತಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ತಂಪೆರೆಯುವ ಜೊತೆಗೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಸಿಲ್ಕ್ ಬೋರ್ಡ್, ಹೆಚ್ಎಸ್ಆರ್ ಲೇಔಟ್, ಟೌನ್ ಹಾಲ್, ಕೆಆರ್ ಮಾರ್ಕೆಟ್, ಕಾರ್ಪೋರೇಷನ್, ಕೆಆರ್ ಸರ್ಕಲ್ ಸೇರಿ ಬೆಂಗಳೂರಿನ ಹಲವೆಡೆ ಮಳೆ ಆರಂಭವಾಗಿದೆ. ಸದ್ಯ ಮಳೆ ಹಿನ್ನಲೆ ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದ್ದು, ಇನ್ನೂ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಆಗಲಿದೆ.