ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ, ಅವರಿಗೆ ಕೇವಲ ಪ್ರಚಾರ, ಚುನಾವಣೆ ವಿಷಯವನ್ನಾಗಿಸಿ ಗೆಲುವು ಸಾಧಿಸುವುದು ಅಷ್ಟೇ ಬೇಕಿರುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿವಾಗ್ದಾಳಿ ನಡೆಸಿದರು.
ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದಲ್ಲಿ 16 ವರ್ಷ ವಯಸ್ಸಿನ ಬಾಲಕಿಯೂ ಸಂತ್ರಸ್ತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ.
ಯಾವ ಆಧಾರದ ಮೇಲೆ ರಾಹುಲ್ ಗಾಂಧಿ ಆ ಹೇಳಿಕೆ ನೀಡಿದರು? ಆ ಬಗ್ಗೆ ಎಸ್ಐಟಿ ಯಾಕೆ ಇನ್ನೂ ತನಿಖೆ ಮಾಡಿಲ್ಲ? 400 ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿದೆ ಎನ್ನುತ್ತಾರೆ. ಹಾಗಾದರೆ ಯಾಕೆ ರಾಹುಲ್ ಗಾಂಧಿಯವರನ್ನು ಇನ್ನು ಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
2,900 ಕೇಸ್ ಇದೆ ಎಂದು ಹೇಳುತ್ತಾರೆ. ಆದರೂ ಒದ್ದಾಡುತ್ತಾರೆ. ಯಾವ ಸಂತ್ರಸ್ತೆಯರೂ ಸಿಗುತ್ತಿಲ್ಲ ಎಂದು ಒದ್ದಾಡುತ್ತಿದ್ದಾರೆ. ಆ ಸಂತ್ರಸ್ತೆಯರಿಗೆ ಏನು ಸ್ಥೈರ್ಯ ತುಂಬುತ್ತೀರಿ ನೀವು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಎಸ್ಐಟಿ ಎಂಬುದು ಈಗ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಆಗಿದೆ. ನಿಜವಾಗಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ಉದ್ದೇಶ ಅವರದ್ದಾಗಿದ್ದರೆ ವಿಡಿಯೋ ಹರಿಯಬಿಟ್ಟವರನ್ನು ಯಾಕೆ ಇನ್ನೂ ಬಂಧಿಸಿಲ್ಲ? ಆ ವಿಚಾರವಾಗಿ ದೂರು ನೀಡಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.