ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀಗೆ ನೋಂದಣಿ ಮಾಡಿಸಿದ್ದ ಲಕ್ಷಾಂತರ ಮಹಿಳೆಯರಿಗೆ ಎರಡು ತಿಂಗಳಾದರೂ ಖಾತೆಗೆ ಹಣ ಜಮೆಯಾಗಿಲ್ಲ. ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಇದಕ್ಕೆ ನೋಂದಣಿ ವಿಫಲ ಅಥವಾ ನೀಡಿದ ದಾಖಲಾತಿಗಳ ಲಿಂಕ್ ಮಾಡಿಸದಿರುವುದು ಪ್ರಮುಖ ಕಾರಣವಾಗಿದೆ.
ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ತಿಂಗಳಗಳು ಕಳೆದಿವೆ. ಈಗಾಗಲೇ ಬಹುತೇಕ ಮಂದಿಗೆ ಎರಡನೇ ಕಂತಿನ ಹಣ ಕೂಡಾ ಸಂದಾಯವಾಗುತ್ತಿದೆ. ಆದರೆ, ಕೆಲವರಿಗೆ ಮೊದಲ ತಿಂಗಳ (ಆಗಸ್ಟ್) ಹಣವೇ ಸಂದಾಯವಾಗಿಲ್ಲ. ಇದರಿಂದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದು, ಸರ್ಕಾರ ಮೋಸ ಮಾಡಿದೆ ಎಂದು ಬೇಸರಗೊಂಡಿದೆ.
ಹಣ ಬಾರದಿದ್ದರೆ ಯಾರನ್ನು ಸಂಪರ್ಕಿಸಬೇಕು?
ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯುಡಿ 2,000 ರೂಪಾಯಿ ಬಾರದಿದ್ದರೆ, ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಚಿಕ್ಕಬಳ್ಳಾಪುರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಶ್ವತ್ಥಮ್ಮ ತಿಳಿಸಿದ್ದಾರೆ.
ಎಲ್ಲಾ ದಾಖಲೆಗಳಲ್ಲೂ ಮಾಹಿತಿ ಒಂದೇ ಇರಬೇಕು
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿರುವ ಬ್ಯಾಂಕ್ ಖಾತೆಯಲ್ಲಿಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಅರ್ಜಿಯೊಂದಿಗೆ ಸಲ್ಲಿಸಿರುವ ಎಲ್ಲಾ ದಾಖಲೆಗಳಲ್ಲಿ ಮಾಹಿತಿ ಒಂದೇ ಇರಬೇಕು. ಒಂದು ವೇಳೆ ವ್ಯತ್ಯಾಸ ಉಂಟಾಗಿದ್ದರೆ ಕೂಡಲೇ ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್‌ಗಳಲ್ಲಿ ಒಮ್ಮೆ ಖಾತೆ ಮೊತ್ತ ಪರಿಶೀಲಿಸಿ
ಕೆಲವೊಮ್ಮೆ ಹಣ ಸಂದಾಯವಾಗಿದ್ದರೂ ಈ ಬಗ್ಗೆ ಯಾವುದೇ ಸಂದೇಶವು ಮೊಬೈಲ್‌ಗೆ ಬಂದಿರುವುದಿಲ್ಲ. ಇದಕ್ಕೆ ತಾಂತ್ರಿಕ ಕಾರಣವೂ ಇರಬಹುದು. ಹೀಗಾಗಿ, ನಿಮ್ಮ ಗ್ರಾಮದ ಜನರಿಗೆ ಗೃಹಲಕ್ಷ್ಮೀ ಹಣ ಜಮೆಯಾಗಿ ನಿಮಗೆ ಜಮೆಯಾಗಿಲ್ಲ ಎನ್ನುವುದಾದರೆ ಒಮ್ಮೆ ನಿಮ್ಮ ಖಾತೆಯ ಮೊತ್ತವನ್ನು ಚೆಕ್ ಮಾಡಿಕೊಳ್ಳಬೇಕು. ಜತೆಗೆ ಆಧಾರ್‌ಗೆ ಇತರೆ ಬ್ಯಾಂಕ್ ಖಾತೆ ಜೋಡಣೆಯಾಗಿದೆಯೇ ಆ ಖಾತೆಯಲ್ಲಿ ಹಣ ಬಂದಿದಿಯೇ ಎಂದು ಚೆಕ್ ಮಾಡಿಕೊಳ್ಳಬೇಕು ಎನ್ನುತ್ತಾರೆ ಅಧಿಕಾರಿಗಳು.
ನೇರವಾಗಿ ತೆರಳಿ ಸಂಪರ್ಕಿಸಿ ವಿಚಾರಿಸಿ
ಕುಟುಂಬ ನಿರ್ವಹಣೆಯಲ್ಲಿ ಕುಟುಂಬದ ಯಜಮಾನಿಯ ಪಾತ್ರ ಪ್ರಮುಖವಾಗಿದೆ. ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ. ಈ ಆಶಯದೊಂದಿಗೆ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ಪಾವತಿಸುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಖಾತೆಗೆ 2,000 ರೂಪಾಯಿ ಜಮಾ ಆಗದಿದ್ದರೆ, ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಉಪನಿರ್ದೇಶಕಿ ಮಾಹಿತಿ ನೀಡಿದೆ.
80 ಲಕ್ಷಕ್ಕೂ ಅಧಿಕ ಜನರಿಗೆ ಹಣ ಜಮೆ
ಗೃಹಲಕ್ಷ್ಮಿ ಯೋಜನೆಯ ಒಟ್ಟು 1.28 ಕೋಟಿ ಫಲಾನುಭವಿಗಳ ಪೈಕಿ 1.12 ಕೋಟಿ ಫಲಾನುಭವಿಗಳು ಇದುವರೆಗೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ 80 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇದುವರೆಗೂ ಹಣ ಸಂದಾಯವಾಗಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಬ್ಯಾಂಕ್‌ಗಳಲ್ಲಿ ಹಣ ಸಂದಾಯವಾಗುವುದು ತಡವಾಗಿದೆ. ಯಾರಿಗೆಲ್ಲಾ ಹಣ ಬಂದಿಲ್ಲವೋ ಅವರಿಗೆ ಮೊದಲ ಕಂತಿನ ಹಣವೂ ಸೇರಿ ಒಟ್ಟು 4 ಸಾವಿರ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.