ನಿಮ್ಮ ಸುದ್ದಿ ಬಾಗಲಕೋಟೆ
ಮಾನವೀಯ ಮೌಲ್ಯಗಳನ್ನೊಳಗೊಂಡ ವಚನ ಸಾಹಿತ್ಯ, ದಾಸ ಸಾಹಿತ್ಯ ಕೀರ್ತನೆಗಳೊಂದಿಗೆ ಮನುಕುಲವೆಲ್ಲ ಒಂದೇ ಎಂಬ ಭಾವನೆಯಿಂದ ಈ ನಾಡಿನಲ್ಲಿ ಆಗಿ ಹೋದ ಸಂತ, ದಾಸರೆಲ್ಲ ಕುಲಗೋತ್ರ ನೋಡಿ ಸಮಾಜ ಕಟ್ಟಿದವರಲ್ಲ ಎಂದು ಹಿರೇಮಾಗಿ ಸರಕಾರಿ ಪ್ರೌಢಶಾಲೆ ಮುಖ್ಯಗುರು ಪಿ.ಎಚ್.ಪವಾರ್ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಎಲ್ಲ ಭಾಷೆ ಎಲ್ಲ ಜನಾಂಗದಲ್ಲೂ ಒಬ್ಬ ಶ್ರೇಷ್ಠ ದಾರ್ಶನಿಕ ಅನಾದಿ ಕಾಲದಿಂದಲೂ ಆಗಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನ ಅಂತಹ ಶ್ರೇಷ್ಠ ದಾಸರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸುತ್ತಿರುವುದರಿಂದ ಸಣ್ಣ ಸಣ್ಣ ಸಮಾಜಗಳಲ್ಲಿ ಬಿನ್ನಾಭಿಪ್ರಾಯ ಆಗಬಾರದೆಂಬ ಉದ್ದೇಶದಿಂದ ಸರಕಾರ ಎಲ್ಲ ಸಮಾಜದವರನ್ನು ಒಗ್ಗೂಡಿಸುವ ಕಾರ್ಯ ಮಾಡಿರುವುದಲ್ಲದೇ ಆಗಿ ಹೋದ ಸಂತ ಮಹಾಂತರ ಸ್ಮರಿಸುವ ಕಾರ್ಯ ಸರಕಾರದಿಂದ ಆಚರಿಸುತ್ತಿರುವುದು ಎಲ್ಲ ಜನಾಂಗಕ್ಕೂ ಉಪಯೋಗವಾಗಿದೆ ಎಂದರು.
ಶರಣರು, ದಾಸರು ನೂರಾರು ವರ್ಷಗಳಿಂದ ಆಗಿ ಹೋಗಿದ್ದರು ಕೂಡಾ ಅಂದೇ ಸಮಾಜದಲ್ಲಿ ಜಾತಿ ವ್ಯವಸ್ಥೆ ಬಗ್ಗೆ ತಮ್ಮ ವಚನಗಳಲ್ಲಿ ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂಬ ವಚನ ರಚಿಸಿದ ಬಸವಣ್ಣನವರು, ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕನಕದಾಸರ ಕೀರ್ತನೆಗಳನ್ನು ಅವಲೋಕಿಸಿದಾಗ ಅಂತಹ ದಾರ್ಶನಿಕ ಗುರಿ ಒಂದೇ ಆಗಿದ್ದು ಅದು ಮನುಕುಲದ ಉದ್ದಾರ ಎಂದು ಹೇಳಿದರು.
ಶಿಕ್ಷಕರಾದ ವಿ.ವಿ.ಹಡಗಲಿ, ಡಾ.ಎಸ್.ಸಿ.ಕೋಚಿ, ಎ.ಎ.ಬಡಗನ್ನ, ಅಶೋಕ ಹುಲ್ಲೂರ, ಲೋಕೇಶ ರಾಠೋಡ, ವಿ.ಡಿ.ನಿಡಗುಂದಿ, ಬಿ.ಡಿ.ಗೌಡರ, ಎನ್.ಬಿ.ಓಲೆಕಾರ ಇದ್ದರು.