ನವದೆಹಲಿ: ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೈಕಮಾಂಡ್ ನಾಯಕರು ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ಲೋಕಸಭೆ ಚುನಾವಣೆ ಸಂಬಂಧ ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದ್ದು, ಎಷ್ಟು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ, ಯಾರ ಹೆಸರು ಅಂತಿಮವಾಗಿದೆ ಎಂದು ನಾನು ಬಹಿರಂಗಪಡಿಸಲು ತಯಾರಿಲ್ಲ ಎಂದರು.
ಎಐಸಿಸಿ ನಾಯಕರು ಮೊದಲ ಪಟ್ಟಿ ಅಂತಿಮಗೊಳಿಸಿ ಶೀಘ್ರವೇ ಬಿಡುಗಡೆ ಮಾಡುತ್ತಾರೆ. ನಾವು ಸಭೆಯಲ್ಲಿ ಶೇ.50ರಷ್ಟು ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಖರ್ಗೆ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ, “ಅವರು ಎಐಸಿಸಿ ಅಧ್ಯಕ್ಷರು. ಅನೇಕರು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಬೇರೆ ಹೆಸರು ಪ್ರಸ್ತಾಪಿಸಿಲ್ಲ. ಅವರು ದೇಶದಾದ್ಯಂತ ಪ್ರವಾಸವನ್ನು ಮಾಡಬೇಕಿದೆ. ಹೀಗಾಗಿ ಅಂತಿಮವಾಗಿ ಅಧ್ಯಕ್ಷರೇ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.