ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ ಆರಂಭವಾಗಿ 7 ತಿಂಗಳು ಗತಿಸಿದರೂ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಉಳಿದಿದೆ.
ಸದಸ್ಯರಾಗಿ ಆಯ್ಕೆ ಆಗಿ ಎರಡೂವರೆ ವರ್ಷದ ನಂತರ 2024ರ ಆಗಸ್ಟ್ ತಿಂಗಳಲ್ಲಿ ಅಧಿಕಾರ ಆರಂಭವಾಗಿತ್ತು. ಈ ಹಿಂದಿನ ಅವಧಿಯಲ್ಲಿ ಯಾವುದೇ ಗೊಂದಲವಿಲ್ಲದ ಕಾರಣ ತಮ್ಮ ತಮ್ಮ ಅಧಿಕಾರಾವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆದಿತ್ತು. ಆದರೆ ಇದೀಗ 7 ತಿಂಗಳು ಕಳೆದರೂ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆಯದಿರುವುದು ಸಂಶಯಕ್ಕೆ ಕಾರಣವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೈಡ್ರಾಮಾ, ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡದಿರಲೆಂದು ಮತ್ತು ಸ್ಥಾಯಿ ಸಮಿತಿ ಆಯ್ಕೆಗೆ ಅಧ್ಯಕ್ಷರು ಮನಸ್ಸು ಮಾಡದಿರುವುದು ಸೇರಿದಂತೆ ಹಲವು ಕಾರಣಗಳಿಂದ ಆಯ್ಕೆ ಪ್ರಕ್ರಿಯೆ ಮುಂದೂಡುತ್ತಲೇ ಬಂದಿದೆ.
ಕಳೆದ ವರ್ಷದ ಸೆ.18 ರಂದು ನಡೆದ ಮೊದಲ ಸಭೆಯಲ್ಲೇ ಸ್ಥಾಯಿ ಸಮಿತಿ ಆಯ್ಕೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ನಂತರ ಡಿ.2 ರಂದು ನಡೆದ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದು ಆಯ್ಕೆ ಆಗಬಹುದೆಂಬ ನಿರೀಕ್ಷೆಯೂ ಮತ್ತೆ ಹುಸಿಯಾಯಿತು. ಇದೀಗ ಮಾ.20 ರಂದು ನಡೆಯುವ ಸಭೆಯಲ್ಲಾದರೂ ಚರ್ಚೆ ನಡೆದು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ನಡೆಯುತ್ತದೆ ಎಂಬ ನಿರೀಕ್ಷೆ ಇದ್ದರೂ ಅಂತಹ ಯಾವುದೇ ಚರ್ಚೆ ಇಲ್ಲ ಎಂಬ ವಿಷಯವೂ ಕೇಳಿ ಬಂದಿದೆ.
ಸದ್ಯ ಮೂರು ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಯುತ್ತಿದ್ದು ಈ ಸಭೆಯಲ್ಲಾದರೂ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆಯೋ ಅಥವಾ ಮತ್ತೊಂದು ಸಭೆವರೆಗೆ ಕಾಯುವುದು ಅನಿವಾರ್ಯವೇ? ಎಂಬ ಪ್ರಶ್ನೆ ಕೆಲ ಸದಸ್ಯರಲ್ಲಿ ಮೂಡಿದೆ.
ಪಟ್ಟಣದಲ್ಲಿನ ಕೆಲ ತುರ್ತು ಸಣ್ಣ-ಪುಟ್ಟ ಕೆಲಸಕ್ಕೆ ಅನುದಾನ ಖರ್ಚು ಮಾಡುವಲ್ಲಿ ಸ್ಥಾಯಿ ಸಮಿತಿ ಅವಶ್ಯಕತೆಯಿದೆ. ಅಧ್ಯಕ್ಷರು, ಅಕಾರಿಗಳು ಸಮಿತಿ ರಚನೆಗೆ ಮುಂದಾಗಬೇಕು.
-ಸಂಜಯ ಐಹೊಳ್ಳಿ, ಪಪಂ ಸದಸ್ಯ.ಸಾಮಾನ್ಯ ಸಭೆ, ಬಜೆಟ್ ಮಂಡನೆ ಇಂದು
ಇಲ್ಲಿನ ಪಟ್ಟಣ ಪಂಚಾಯಿತಿಯ ಸಭಾಭವನದಲ್ಲಿ ಸಾಮಾನ್ಯ ಸಭೆ ಮಾ.20 ರಂದು ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಪಪಂ ಅಧ್ಯಕ್ಷೆ ಬಿ.ಆರ್.ಚೌಹಾಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಅಧ್ಯಕ್ಷೆ ಬಜೆಟ್ ಮಂಡಿಸಲಿದ್ದು, ನಾನಾ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಮುಖ್ಯಾಧಿಕಾರಿ ಸುರೇಶ ಪಾಟೀಲ ತಿಳಿಸಿದ್ದಾರೆ.