ಬಾಗಲಕೋಟೆ
ಸರಳ ಹಾಗೂ ಸಮಾಜಮುಖಿಯಾಗಿ ಬಾಳಿದವರು ವಚನ ಸಾಹಿತಿಗಳು ಎಂದು ಸಾಹಿತಿ ಶಿವಾನಂದ ಪೂಜಾರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಚನ ಸಾಹಿತ್ಯದ ಕುರಿತು ಮಾತನಾಡಿದ ಅವರು, ವಚನ ಧರ್ಮ ಮಾನವ ಧರ್ಮ ಸಾರುತ್ತದೆ. ಒಂದು ಧರ್ಮಕ್ಕೆ ಸೀಮಿತವಾಗದೆ ಸರ್ವ ಜನರನ್ನು ಒಳಗೊಂಡ ಸಾಹಿತ್ಯವಾಗಿದೆ. ಇದರ ಸಾಹಿತ್ಯ ಪರಂಪರೆ ಗಟ್ಟಿಯಾಗಿದ್ದು ವಿಶ್ಚ ಸಾಹಿತ್ಯವಾಗಿ ಬೆಳೆದಿದೆ ಎಂದರು.
ವಚನ ಸಾಹಿತ್ಯವನ್ನು ಇನ್ನಾವುದೇ ಸಾಹಿತ್ಯದಿಂದ ನೋಡಲು ಸಾಧ್ಯವಿಲ್ಲ. ವಚನ ಸಾಹಿತ್ಯ ರಚನೆಗೆ ಅರ್ಹತೆ ಬೇಕಿಲ್ಲ, ಇಂತಹ ವಚನ ಸಾಹಿತ್ಯ ಅನುಭವದ ಸಾಹಿತ್ಯವಾಗಿದೆ. ದಾಸೋಹ ಹಾಗೂ ಕಾಯಕದ ಮೇಲೆ ರಚನೆಯಾದ ಇದನ್ನು ಕನ್ನಡ ನಾಡಿನ ಶರಣರಲ್ಲಿ ಮಾತ್ರ ಕಾಣಬಹುದು ಎಂದು ಹೇಳಿದರು.
ಬೀಳಗಿ ಶಾಸಕ ಜೆ.ಟಿ.ಪಾಟೀಲ, ಸಾಹಿತ್ಯ ಸಮ್ಮೇಳನಗಳಿಗೆ ರಾಜಕಾರಣಿಗಳನ್ನು ಕರೆಯಬೇಡಿ. ಕೆಲವರು ಸಾಹಿತ್ಯದ ಶತ್ರುಗಳಂತಿರುತ್ತಾರೆ. ಅಂತವರಿಂದ ಸಮ್ಮೇಳನಕ್ಕೂ ಶೋಭೆ ತರುವುದಿಲ್ಲ. ಸಾಹಿತ್ಯ ಜನ ಸಾಮಾನ್ಯರು ಓದುವಂತಾಗಬೇಕು. ಸಾಹಿತಿಗಳು ಪ್ರಸ್ತುತ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವಂತಾಗಬೇಕು. ಆಲಮಟ್ಟಿ ಆಣೆಕಟ್ಟು ಆರಂಭದಲ್ಲಿ 230 ಕೋಟಿ ರೂ.ಗೆ ಅಡಿಗಲ್ಲು ಆಗಿದ್ದು ಇದೀಗ ಅದರ ವೆಚ್ಚ ಲಕ್ಷ ಕೋಟಿ ತಲುಪಿದೆ. ಹೀಗಿದ್ದರೂ ಯೋಜನೆ ಪೂರ್ಣಗೊಳ್ಳಬಹುದೇ ಎಂಬ ಸಂಶಯ ಮೂಡುವಂತಾಗಿದೆ. ಇಂತಹ ಸಮಸ್ಯೆಗಳ ಕುರಿತು ಸರಕಾರದ ಗಮನ ಸೆಳೆಯುವಲ್ಲಿ ಸಾಹಿತಿಗಳು ಮುಂದಾಗಬೇಕು ಎಂದು ಹೇಳಿದರು.
ಸಾಹಿತಿ ಎಂ.ಜಿ.ದಾಸರ ತತ್ವಪದ ಹಾಗೂ ಕೀರ್ತನೆಗಳ ಕುರಿತು, ಹುನಗುಂದ ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಜನಪದ ಸಾಹಿತ್ಯದ ಕುರಿತು ಮಾತನಾಡಿದರು.
ಸರ್ವಾಧ್ಯಕ್ಷ ತಾತಾಸಾಹೇಬ ಬಾಂಗಿ, ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ಮಾಟೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಬಸವರಾಜ ಕುಂಬಾರ ಆಶಯ ನುಡಿ ಹೇಳಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಸಿ.ಎನ್.ಬಾಳಕ್ಕನವರ, ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ವಿ.ಜಿ.ಗೋವಿಂದಪ್ಪನವರ ಇತರರು ಇದ್ದರು.