ಬಾಗಲಕೋಟ
ಹುನಗುಂದ: ಪಟ್ಟಣಕ್ಕೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಭೇಟಿ ನೀಡಿದರು.
ಸಾಹಿತ್ಯ ಹಾಗೂ ಶಿಕ್ಷಕ ಸಂಘಟನೆಯ ಪ್ರಮುಖರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶೀಘ್ರದಲ್ಲೇ ವಿಜಯಪುರದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದರು.
ಹಿರಿಯ ಮಕ್ಕಳ ಸಾಹಿತಿ ಸಿಂದಗಿಯ ಹ. ಮ. ಪೂಜಾರ ಹಾಗೂ ಇತರ ಸಾಹಿತಿಗಳೊಂದಿಗೆ ಈಗಾಗಲೇ ಒಂದು ಹಂತದ ಚರ್ಚೆ ಮುಕ್ತಾಯಗೊಂಡಿದ್ದು, ಬಾಲ ವಿಕಾಸ ಅಕಾಡೆಮಿ ಹಾಗೂ ಇತರ ಸಂಘಟನೆಗಳ ಸಹಕಾರದಿಂದ ದೊಡ್ಡ ಪ್ರಮಾಣದಲ್ಲಿ ಸಮ್ಮೇಳನ ನಡೆಸಲಾಗುವುದು.
ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು, ಪುಸ್ತಕ ಬಿಡುಗಡೆ, ಸಾಧಕ ಮಕ್ಕಳು ಹಾಗೂ ಶಿಕ್ಷಕರಿಗೆ ಗೌರವ ಸಮರ್ಪಣೆ, ಉಪನ್ಯಾಸ, ಸಂವಾದ ಗೋಷ್ಠಿಗಳು ನಡೆಯಲಿವೆ ಎಂದರು.
ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಗುರಿಯೊಂದಿಗೆ ಬಾಲ ವಿಕಾಸ ಅಕಾಡೆಮಿ ಕಾರ್ಯೋನ್ಮುಖವಾಗಿದೆ. ಆ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಾಡಿಗೆ ಪರಿಚಯಿಸಲು ಅಕಾಡೆಮಿಯು ಸ್ಟುಡಿಯೋವೊಂದನ್ನು ನಿರ್ಮಿಸುತ್ತಿದೆ. ಅಲ್ಲಿ ಮಕ್ಕಳ ಸಾಧನೆಯನ್ನು ಬಿಂಬಿಸುವ ನೃತ್ಯ, ಗಾಯನ, ಸಂಗೀತ, ಕ್ರೀಡೆ, ಸಾಹಸ ಮೊದಲಾದ ಚಟುವಟಿಕೆಗಳು ಹಾಗೂ ಹಿರಿಯ ವಿಜ್ಞಾನಿಗಳು, ಸಾಧಕರು, ವಿದ್ವಾಂಸರ ಚರ್ಚೆ, ಸಂವಾದ, ಭಾಷಣ, ಅಭಿಪ್ರಾಯಗಳನ್ನು ಪ್ರಸಾರ ಮಾಡುವ ಮೂಲಕ ಮಕ್ಕಳ ಜ್ಞಾನ ವಿಕಾಸಕ್ಕೆ ವೇದಿಕೆ ನಿರ್ಮಿಸಲಾಗುವುದು ಎಂದರು.
ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಕುರಿತು ಶಿಕ್ಷಕರೊಂದಿಗೆ ಸಂವಾದಿಸಿದ ಸಂಗಮೇಶ ಬಬಲೇಶ್ವರ, ಶಾಲಾ ಶಿಕ್ಷಣ ಇಲಾಖೆ ಟಿಈಟಿ ಮತ್ತು ಸಿಈಟಿಯ ಮೂಲಕ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದೆ. ಅವರನ್ನು ಬೋಧನೆಯ ಜೊತೆಗೆ ಇತರೆ ಕೆಲಸದ ಒತ್ತಡದಿಂದ ಮುಕ್ತಗೊಳಿಸಿ ತರಗತಿ ಕೊಠಡಿಯಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡಬೇಕಾಗಿದೆ. ಮಕ್ಕಳ ಕಲಿಕೆಯ ಬುನಾದಿ ಹಂತವಾದ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಕಲಿಕೆಯು ಉಂಟಾದರೆ ಎಸ್ ಎಸ್ ಎಲ್ ಸಿ ಯಲ್ಲಿ ಸೂಕ್ತ ಫಲಿತಾಂಶ ಗಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹುನಗುಂದ ತಾಲೂಕ ಶಿಕ್ಷಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಎಂ. ಬಾಗವಾನ, ಮಾಜಿ ಅಧ್ಯಕ್ಷ ಸಿದ್ದು ಶೀಲವಂತರ, ರಾಜ್ಯ ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಸಂಗಣ್ಣ ಹಂಡಿ, ಮಕ್ಕಳ ಸಾಹಿತಿ ಅಶೋಕ ಬಳ್ಳಾ, ತಾಲೂಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭು ಮಾಲಗಿತ್ತಿ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಅಂದಾನಯ್ಯ ವಸ್ತ್ರದ, ಬಿಐಈಆರ್ಟಿ ಸಂಗಮೇಶ ಹೊದ್ಲೂರ, ಸಿ.ಆರ್.ಪಿ. ಸಂಗಪ್ಪ ಸಂಗಮ, ಶಿಕ್ಷಕ ಸುಭಾಷ ಕಣಗಿ, ಸಂಗಣ್ಣ ಶಿರೂರ ಉಪಸ್ಥಿತರಿದ್ದರು.