ಬಾಗಲಕೋಟೆ
ರನ್ನನ ನಾಡು ಮುಧೋಳ ನಗರದಲ್ಲಿ ಸೆಪ್ಟೆಂಬರ 10, 11 ಹಾಗೂ 12 ರಂದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 14 ಮತ್ತು 17 ವಯೋಮಾನದೊಳಗಿನ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಜರುಗಲಿವೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ.
ಮುಧೋಳ ರನ್ನ ಕ್ರೀಡಾಂಗಣದ ಹತ್ತಿರವಿರುವ ದಾನಮ್ಮದೇವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕಾ ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಈಗಾಗಲೇ ಈ ಸ್ಪರ್ಧೆಯ ಯಶಸ್ವಿ ಸಂಘಟನೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಸುಮಾರು 26 ಜಿಲ್ಲೆಗಳಿಂದ 700 ಬಾಲಕರು ಹಾಗೂ 600 ಬಾಲಕಿಯರು ಕ್ರೀಡಾ ಪಟುಗಳು ಹಾಗೂ ಪ್ರತಿ ಜಿಲ್ಲೆಯಿಂದ ತಂಡದ ವ್ಯವಸ್ಥಾಪಕರು ಭಾಗವಿಸುವುದು ಖಚಿತ ಪಡಿಸಿರುತ್ತಾರೆ. ಸದರಿ ಪಂದ್ಯಾವಳಿಯಲ್ಲಿ ಸುಮಾರು 50 ಜನ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಸೆಪ್ಟೆಂಬರ 10 ರಂದು ಡಾ.ಬಿ.ಆರ್.ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನರಾಮ ಸಭಾಭವನದಲ್ಲಿ ತಂಡಗಳ ನೋಂದಣಿ ಕಾರ್ಯ ನಡೆಯಲಿದೆ. ಸಂಜೆ 5 ಘಂಟೆಗೆ ತಂಡದ ವ್ಯವಸ್ತಾಪಕರ ಸಭೆ ನಡೆಸಲಾಗುತ್ತದೆ.
ಸೆಪ್ಟೆಂಬರ 11 ರಂದು ಬೆಳಿಗ್ಗೆ 10ಕ್ಕೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನವದೆಹಲಿಯ ವಿಶೇಷ ಪ್ರತಿನಿಧಿ-1 ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆ.
ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಗಮಿಸಲಿರುವ ಕ್ರೀಡಾವಟುಗಳಿಗೆ ಹಾಗೂ ತಂಡದ ವ್ಯವಸ್ಥಾಪಕರಿಗೆ ತಾಲೂಕಿನ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಪಟುಗಳಿಗೆ ಹಾಗೂ ತಂಡದ ವ್ಯವಸ್ಮಾಪಕರಿಗೆ ವಸತಿ ಸ್ಥಳಗಳಿಂದ ಕ್ರೀಡಾ ಮೈದಾನ ಮತ್ತು ತಂಗುವ ಸ್ಥಳಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
*ವಿಜಯ ಮಹಾಂತೇಶ್ವರ ಜಾತ್ರೆ*
*ಇಳಕಲ್ಲ ನಗರದಾದ್ಯಂತ ಮದ್ಯ ಮಾರಾಟ ನಿಷೇಧ*
——————————–
ಬಾಗಲಕೋಟೆ: ಇಳಕಲ್ಲ ನಗರದಲ್ಲಿ ಸೆಪ್ಟೆಂಬರ 10 ರಿಂದ 13 ವರೆಗೆ ಜರುಗಲಿರುವ ಶ್ರೀ ವಿಜಯ ಮಹಾಂತೇಶ್ವರ ಜಾತ್ರಾ ನಿಮಿತ್ಯ ರಥೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಜಾತ್ರೆಯ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆಪ್ಟೆಂಬರ 10ರ ಮಧ್ಯರಾತ್ರಿಯಿಂದ ಸೆಪ್ಟೆಂಬರ 13ರ ಬೆಳಿಗ್ಗೆ 6 ಗಂಟೆವರೆಗೆ ಇಲಕಲ್ಲ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀರ, ಬ್ರ್ಯಾಂಡಿ ಹಾಗೂ ಲಿಕ್ಕರ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕೆ.ಎಂ.ಜಾನಕಿ ಆದೇಶ ಹೊರಡಿಸಿದ್ದಾರೆ.