*ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023*
ಬಾಗಲಕೋಟೆ:
ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳು ಸನ್ನದ್ದರಾಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‍ಕುಮಾರ ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾವಣೆಯ ಮಾದರಿ ನೀತಿ ಸಂಹಿತೆ ಪಾಲನೆ ಮಾಡುವದರ ಜೊತೆಗೆ ಅಧಿಕಾರಿಗಳು ಪಕ್ಷಾತೀತವಾಗಿ ಹಾಗೂ ಯಾರಿಗೂ ಸಂಶಯ ಬಾರದಂತೆ ಪ್ರಾಮಾಣಿಕವಾಗಿ ಚುನಾವಣಾ ಕಾರ್ಯ ಮಾಡತಕ್ಕದ್ದು. ಯಾವುದೇ ಸಮಸ್ಯೆಗಳಿದ್ದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸಲು ತಿಳಿಸಿದರು.
ಜಿಲ್ಲೆಯಾಧ್ಯಂತ ಮಾದರಿ ನೀತಿ ಸಂಹಿತೆ ಪಾಲನೆಗೆ ರಚಿಸಲಾದ ಕ್ಷಿಪ್ರ ಸಂಚಾರಿ ತಂಡಗಳು, ವಿಡಿಯೋ ಕಣ್ಗಾವಲು ತಂಡ, ವಿಡಿಯೋ ವೀಕ್ಷಣಾ ತಂಡ, ಸ್ಥಾಯಿ ಕಣ್ಗಾವಲು ತಂಡಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು. ಪ್ರತಿಯೊಂದು ತಂಡಕ್ಕೆ ವಾಟ್ಸ್‍ಪ್ ಗ್ರೂಪ್ ಮಾಡಲಾಗಿದ್ದು, ಪ್ರತಿದಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಲೋಕೇಶನ್ ಸಹಿತ ವಿಡಿಯೋ, ಛಾಯಾಚಿತ್ರ ಸಮೇತ ಮಾಹಿತಿಯನ್ನು ಹಾಕುವದರ ಜೊತೆಗೆ ಸಿ-ವಿಜಿಲ್ ಆಪ್‍ಗೆ ಅಪಲೋಡ್ ಮಾಡಲು ತಿಳಿಸಿದರು.
ಆಯಾ ಮತಕ್ಷೇತ್ರಗಳಲ್ಲಿರುವ ಸರಕಾರಿ ನಿರೀಕ್ಷಣಾ ಮಂದಿರಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು. ಬ್ಯಾನರ್, ಬಂಟಿಂಗ್ಸ್‍ಗಳನ್ನು ತೆರವುಗೊಳಿಸುವ ಕಾರ್ಯ ತುರ್ತಾಗಿ ಪೂರ್ಣಗೊಳ್ಳತಕ್ಕದ್ದು. ಕೆ.ಎಸ್.ಆರ್‍ಟಿಸಿ ಬಸ್‍ಗಳ ಮೇಲಿರುವ ಜಾಹೀರಾತುಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು. ಆಯಾ ಮತಕ್ಷೇತ್ರಗಳಲ್ಲಿ ಸ್ಥಾಪಿಸಲಾದ ಎಲ್ಲ ಚೆಕ್‍ಪೋಸ್ಟಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಜವಾಬ್ದಾರಿಯುತವಾಗಿ ಚೆಕ್‍ಪೋಸ್ಟಗಳಲ್ಲಿ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು ಆಗಾಗ್ಗೆ ಪರಿಶೀಲನೆ ಮಾಡಲು ತಿಳಿಸಿದರು.
ಸಭೆಯಲ್ಲಿ ಯುಕೆಪಿಯ ಮಹಾವ್ಯವಸ್ಥಾಪಕ ಭಂವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಐ.ಎ.ಎಸ್ ಅಧಿಕಾರಿ ಕನಿಷ್ಕ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸೇರಿದಂತೆ ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವಿವಿಧ ಕಮಿಟಿಯ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.