ಬಾಗಲಕೋಟೆ: ಬಾಗಲಕೋಟೆಯಿಂದ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಎನ್ನುವ ವದಂತಿ ಬಯಲಾಗಿದ್ದೇ ತಡ, ವೀಣಾ ಕಾಶಪ್ಪನವರ್ಬೆಂಬಲಿಗರಂತೂ ಬೆಂಕಿಯಂತಾಗಿದ್ದು, ಇಂದು(ಮಾ.20) ಬಾಗಲಕೋಟೆಯ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ ವೀಣಾ ಕಾಶಪ್ಪನವರ್ ಬೆಂಬಲಿಗರು, ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಗೋ ಬ್ಯಾಕ್ ಸಂಯುಕ್ತಾ ಪಾಟೀಲ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಎಂದು ಮಾಹಿತಿ ತಿಳಿದು ಬಂದಿದೆ.
ಬ್ಯಾರಿಕೇಡ್ ತಳ್ಳಿದ ಬೆಂಬಲಿಗರು, ಕಚೇರಿ ಒಳಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಪ್ರತಿಭಟನಕಾರರನ್ನ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಸಂದರ್ಭದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಪೊಲೀಸರು ಒಳಗೆ ಬಿಡಿದಿದ್ದಕ್ಕೆ ಸಂಯುಕ್ತಾ ಪಾಟೀಲ್ ವಿರುದ್ಧದ ಘೋಷಣೆಗಳನ್ನ ಸುಟ್ಟು ಹಾಕಿದರು.
‘ನಮ್ಮ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಚುನಾವಣಾ ಸಮಿತಿ ಸಭೆಯಲ್ಲಿ ವೀಣಾ ಹೆಸರು ಪ್ರಸ್ತಾಪವಾಗಿಲ್ಲ. ನಿಮ್ಮ ಸ್ಥಳೀಯ ನಾಯಕರ ಜೊತೆ ಚರ್ಚಿಸಲು ವರಿಷ್ಠರು ಹೇಳಿದ್ದಾರೆ. ನಮ್ಮ ಜಿಲ್ಲಾ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇನೆ. ರಾಜ್ಯ ನಾಯಕರು ಹೊಸ ಅಭ್ಯರ್ಥಿ ಬಗ್ಗೆ ಚರ್ಚಿಸಬೇಕಿತ್ತು. ಆದರೆ, ಸ್ಥಳೀಯ ನಾಯಕರು, ನನ್ನ ಜೊತೆ ಯಾರೂ ಚರ್ಚಿಸಿಲ್ಲ. ಈ ಮೂಲಕ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೆಹಲಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಸ್ವ ಪಕ್ಷದ ವಿರುದ್ದವೇ ಕಿಡಿಕಾರಿದರು.
ಇತ್ತ ಬಾಗಲಕೋಟೆಯಲ್ಲಿ ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ರೆ, ಅತ್ತ ದೆಹಲಿಯಲ್ಲಿ ವೀಣಾ ಕಾಶಪ್ಪನವರ್ ಟಿಕೆಟ್ಗಾಗಿ ಕಸರತ್ತು ಮಾಡುತ್ತಿದ್ದು, ಇದೇ ವೇಳೆ ಟಿಕೆಟ್ ಮಿಸ್ ಆಗಿದೆ ಎನ್ನುವ ವಿಚಾರಕ್ಕೆ ಮಾತನಾಡುವ ವೇಳೆ ವೀಣಾ ಅವರು ಕಣ್ಣೀರು ಹಾಕಿದರು. ನನ್ನ ತುಳಿಯುವ ಹುನ್ನಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಪತ್ನಿ ಪರ ಮಾತಾಡುತ್ತಾ ತಮ್ಮದೇ ನಾಯಕರ ವಿರುದ್ಧ ಕಿಡಿಕಾರಿದ ವಿಜಯಾನಂದ ಕಾಶಪ್ಪನವರ್, ‘ಏನೇನು ಅನಾಹುತ ಆಗುತ್ತೋ ಆಗುತ್ತದೆ ಎಂದು ಗರಂ ಆದರು ಎಂದು ಮಾಹಿತಿ ಕಂಡು ಬಂದಿದೆ.