ಹುಬ್ಬಳ್ಳಿ: ಕೇಂದ್ರದ ಗೃಹ ಸಚಿವ ಅಮಿತ್ ಶಾ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವಾಚ್ಯ, ಅಸಭ್ಯವಾಗಿ ಮಾತನಾಡುವ ಮೂಲಕ ಅವರ ಸಂಸ್ಕೃತಿ ಏನು ಎಂಬುದನ್ನು ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯತೀಂದ್ರ ಮಾತು ಗಮನಿಸಿದರೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತಿದ್ದು, ಹಿಂದೆ ಅಮಿತ್ ಶಾ ಅವರ ಮೇಲೆ ಕಾಂಗ್ರೆಸ್ ಪಕ್ಷ ಸುಳ್ಳು ಪ್ರಕರಣ ದಾಖಲಿಸಿತ್ತು.
ಈಗ ಎಲ್ಲ ಪ್ರಕರಣಗಳನ್ನು ಕೋರ್ಟ್ ತಿರಸ್ಕರಿಸಿದ್ದು, ಅವರು ಸಂಪೂರ್ಣವಾಗಿ ದೋಷ ಮುಕ್ತರಾಗಿದ್ದಾರೆ ಎಂದರು.
ಆರ್ಟಿಕಲ್ 370 ಇತ್ಯಾದಿಗಳನ್ನು ನಾವು ಸಂವಿಧಾನತ್ಮವಾಗಿ ಮಾಡಿದ್ದೇವೆ. ಸಂವಿಧಾನಕ್ಕೆ ಎಂದಿಗೂ ಕಾಂಗ್ರೆಸ್ಸಿನವರು ಗೌರವ ನೀಡಿಲ್ಲ. ಬದಲಾಗಿ ಕತ್ತುಹಿಸುಕಿದವರು. ನಾವು ಸಂವಿಧಾನದ ದಿನವನ್ನು ಆಚರಣೆಗೆ ತಂದಿದ್ದೇವೆ. ಆದರೆ, ಕಾಂಗ್ರೆಸ್ಸಿನವರು ಸಂವಿಧಾನದ ಬದಲಾವಣೆಯ ಅಪಪ್ರಚಾರ ಮಾಡುತ್ತಿದ್ದಾರೆ. ಜನತೆ ಪ್ರಜ್ಞಾವಂತರಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನವರು ನಲಪಾಡ್‌ನಂಥವನನ್ನು ತಮ್ಮ ಪಕ್ಷದಲ್ಲಿಟ್ಟುಕೊಂಡು ಗೂಂಡಾಗಿರಿ ಬಗ್ಗೆ ಮಾತನಾಡುತ್ತಿದ್ದು, ಈ ರೀತಿ ಅನೇಕರು ಕಾಂಗ್ರೆಸ್‌ನಲ್ಲಿದ್ದಾರೆ. ದೇಶ ಕಂಡ ಅತ್ಯಂತ ದಕ್ಷ ಗೃಹಮಂತ್ರಿ ಅಮಿತ್ ಶಾ ಅವರ ಬಗ್ಗೆ ಮಾತನಾಡಿರುವುದು ಅವರ ನಾಲಿಗೆಯ ಸಂಸ್ಕೃತಿ ಹೇಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.